ಮಂಗಳೂರು : ನಮ್ಮ ಕರಾವಳಿಯ ಮಂಗಳೂರು ಪ್ರತಿಭೆಗಳ ಗಣಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮಂಗಳೂರಿನ ಶಕ್ತಿನಗರದ ನಿವಾಸಿ ಆದಿ ಸ್ವರೂಪ ತನ್ನ ಅಸಾಧಾರಣ ಬರವಣಿಗೆಯ ಕೌಶಲದಿಂದ ಇಡೀ ದೇಶದ ಗಮನ ಸೆಳೆಯುತ್ತಿದ್ದಾಳೆ.


ಈಕೆ ತನ್ನ ಎರಡೂ ಕೈಗಳನ್ನು ಏಕಕಾಲದಲ್ಲಿ ಬಳಸಿ (Ambidextrous Writing) ಅತ್ಯಂತ ವೇಗವಾಗಿ ಬರೆಯುವುದನ್ನು ಕಾಣಬಹುದು. ಕೇವಲ ಒಂದು ನಿಮಿಷದಲ್ಲಿ ಬರೊಬ್ಬರಿ 45 ಪದಗಳನ್ನು ಬರೆಯುವ ಮೂಲಕ ಈಕೆ ಎಲ್ಲರನ್ನೂ ಬೆರಗುಗೊಳಿಸಿದ್ದಾಳೆ.

ಮಂಗಳೂರಿನ ‘ಸ್ವರೂಪ ಅಧ್ಯಯನ ಕೇಂದ್ರ’ದ ಗೋಪಾಡ್ಕರ್ ಮತ್ತು ಸುಮಂಗಳಾ ದಂಪತಿಯ ಪುತ್ರಿಯಾಗಿರುವ ಆದಿ ಸ್ವರೂಪ, ಬರವಣಿಗೆ ಮಾತ್ರವಲ್ಲದೆ ಸಂಗೀತ ಮತ್ತು ಚಿತ್ರಕಲೆಯಲ್ಲೂ ಪರಿಣಿತಿ ಹೊಂದಿದ್ದಾಳೆ.

ಈಕೆಯ ಏಕಾಗ್ರತೆ ಮತ್ತು ಮೆದುಳಿನ ಅದ್ಭುತ ಸಮತೋಲನವನ್ನು ಕಂಡು ಆನಂದ್ ಮಹೀಂದ್ರಾ ಅವರಂತಹ ಗಣ್ಯರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹತ್ತು ಬೆರಳುಗಳನ್ನು ಬಳಸಿ ಹತ್ತು ವಿಭಿನ್ನ ರೀತಿಯಲ್ಲಿ ಬರೆಯಬಲ್ಲ ಈ ಮಂಗಳೂರಿನ ಮಗಳ ಸಾಧನೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.



