ಮಂಗಳೂರು: ಕರಾವಳಿ ಭಾಗದ ಜನತೆ ಹಾಗೂ ವಕೀಲ ಸಮುದಾಯದ ಬಹುಕಾಲದ ನ್ಯಾಯಸಮ್ಮತ ಬೇಡಿಕೆಯಾದ ಹೈಕೋರ್ಟ್ ಪೀಠವನ್ನು ಮಂಗಳೂರು ನಗರದಲ್ಲಿ ಸ್ಥಾಪಿಸುವ ವಿಚಾರ ಇದೀಗ ತುರ್ತು ಅಗತ್ಯವಾಗಿ ಪರಿಣಮಿಸಿದೆ.


ಪ್ರಸ್ತುತ ಕರ್ನಾಟಕ ಹೈಕೋರ್ಟ್ ವ್ಯಾಪ್ತಿಗೆ ಒಳಪಟ್ಟಿರುವ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಾವಿರಾರು ನಾಗರಿಕರು ತಮ್ಮ ನ್ಯಾಯಸಂಬಂಧಿತ ವಿಚಾರಗಳಿಗಾಗಿ ಬೆಂಗಳೂರಿಗೆ ತೆರಳಬೇಕಾಗಿರುವುದು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ದೊಡ್ಡ ಭಾರವಾಗಿದೆ. ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಇದು ಹೆಚ್ಚು ಕಷ್ಟಕರವಾಗಿದೆ. ನ್ಯಾಯವು ಜನರ ಮನೆಬಾಗಿಲಿಗೆ ತಲುಪಬೇಕಾದ ಮೂಲಭೂತ ಸಿದ್ಧಾಂತದ ಪ್ರಕಾರ, ಮಂಗಳೂರಿನಲ್ಲಿ ಶಾಶ್ವತ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯವಶ್ಯಕವಾಗಿದೆ.

ಕರಾವಳಿ ಭಾಗವು ಶಿಕ್ಷಣ, ವಾಣಿಜ್ಯ, ಕೈಗಾರಿಕೆ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ರಾಜ್ಯದ ಪ್ರಮುಖ ಕೇಂದ್ರವಾಗಿದ್ದು, ಇಲ್ಲಿ ನ್ಯಾಯಾಂಗ ವ್ಯವಸ್ಥೆಯ ವಿಸ್ತರಣೆ ಕಾಲಬದ್ಧ ಹಾಗೂ ನ್ಯಾಯೋಚಿತ ಕ್ರಮವಾಗಿದೆ. ಹೈಕೋರ್ಟ್ ಪೀಠ ಸ್ಥಾಪನೆಯಿಂದ ಪ್ರಕರಣಗಳ ತ್ವರಿತ ವಿಲೇವಾರಿ ಸಾಧ್ಯವಾಗುವುದಲ್ಲದೆ, ಜನಸಾಮಾನ್ಯರಿಗೆ ನ್ಯಾಯ ಸುಲಭವಾಗಿ ಲಭ್ಯವಾಗಲಿದೆ.
ಈ ಬೇಡಿಕೆಗೆ ಈಗಾಗಲೇ ಹಲವಾರು ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು, ವಕೀಲರ ಸಂಘಗಳು ಮತ್ತು ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಕರಾವಳಿ ಭಾಗದ ಜನರ ಭಾವನೆಗಳನ್ನು ಗೌರವಿಸಿ, ಸಮಗ್ರ ಪರಿಶೀಲನೆ ನಡೆಸಿ, ಶೀಘ್ರದಲ್ಲೇ ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಕರಾವಳಿಯ ಜನರ ಹಿತಾಸಕ್ತಿಯನ್ನು ಮನಗಂಡು, ನ್ಯಾಯ ವ್ಯವಸ್ಥೆಯ ಸಮತೋಲನ ಮತ್ತು ಸುಗಮತೆಗೆ ಮಂಗಳೂರುನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.
ಮಹಮ್ಮದ್ ಅಸ್ಗರ್,ನ್ಯಾಯವಾದಿ

