ಮಂಗಳೂರು: ಕೈ ಕೊಯ್ದುಕೊಂಡು ರಕ್ತದಲ್ಲೇ ಹುಡುಗಿ ಹೆಸರು ಬರೆದಿಟ್ಟು ಸ್ಟೇಟಸ್ ಹಾಕಿ ಕುಂಬಳೆಯ ಯುವಕ ಸಾವಿಗೆ ಶರಣು

Prakhara News
1 Min Read

ಮಂಗಳೂರು, ಫೆ.18: ಯುವಕನೊಬ್ಬ ತನ್ನ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ, ಬಳಿಕ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕದ್ರಿ ಶಿವಭಾಗ್ ಬಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದಿದೆ.

ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಪೆರುವಾಡ್ ನಿವಾಸಿ ರೋಶನ್ (22) ಮೃತಪಟ್ಟ ಯುವಕ. ಕದ್ರಿ ಪಾರ್ಕ್ ಬಳಿಯ ಐಸ್ ಕ್ರೀಂ ಅಂಗಡಿ ಒಂದರಲ್ಲಿ ಕೆಲಸಕ್ಕಿದ್ದ ರೋಶನ್ ನಾಲ್ಕು ತಿಂಗಳಿನಿಂದ ಅಪಾರ್ಟ್ಮೆಂಟಿನಲ್ಲಿ ಇತರೇ ಯುವಕರೊಂದಿಗೆ ಬಾಡಿಗೆಗೆ ನೆಲೆಸಿದ್ದ. ನಿನ್ನೆ ರಾತ್ರಿ ತನ್ನ ಕೈಯನ್ನು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ್ದು ಕೊಠಡಿಯಲ್ಲಿ ರಕ್ತದ ಕೋಡಿಯೇ ಹರಿದಿದೆ. ಬಳಿಕ ನೇಣು ಬಿಗಿದುಕೊಂಡಿರುವ ಸಾಧ್ಯತೆಯಿದೆ. ಕೊಠಡಿಯಲ್ಲಿ ಮದ್ಯದ ಬಾಟಲಿಯೂ ಪತ್ತೆಯಾಗಿದೆ. ಇಂದು ಬೆಳಗ್ಗೆ ಹತ್ತು ಗಂಟೆ ವೇಳೆಗೆ ಕೊಠಡಿಯಿಂದ ಹೊರಗಡೆ ಬರದೇ ಇದ್ದುದರಿಂದ ಇತರರು ಬಾಗಿಲು ತೆಗೆದು ನೋಡಿದಾಗ ಸಾವಿಗೆ ಶರಣಾಗಿದ್ದು ಕಂಡುಬಂದಿದೆ.

ಸ್ಥಳದಲ್ಲಿ ರಕ್ತದಲ್ಲೇ ಹುಡುಗಿಯೊಬ್ಬಳ ಹೆಸರನ್ನು ಬರೆದಿದ್ದು ಪತ್ತೆಯಾಗಿದೆ. ಇದಲ್ಲದೆ, ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಇದು ನನ್ನ ಕೊನೆಯ ಸ್ಟೇಟಸ್ ಅಂತಲೂ ಬರೆದುಕೊಂಡಿದ್ದಾನೆ. ಪ್ರೇಮ ವೈಫಲ್ಯದಿಂದ ಸಾವಿಗೆ ಶರಣಾಗಿದ್ದಾನೆಯೇ ಎಂಬ ಅನುಮಾನ ಇದೆ. ಏಳು ತಿಂಗಳ ಹಿಂದೆ ರೋಶನ್ ತನ್ನ ಊರಿನಲ್ಲಿಯೂ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬುದು ಆತನ ಮನೆಯವರಿಂದ ಪೊಲೀಸರಿಗೆ ತಿಳಿದುಬಂದಿದೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment