ಮಂಗಳೂರು ನಗರದಲ್ಲಿ ಅಲ್ಲಲ್ಲಿ ಪೊಲೀಸ್ ಬೂತ್ ಅಳವಡಿಕೆ, ತಮಿಳುನಾಡಿನ ವ್ಯಕ್ತಿಗೆ ಗುತ್ತಿಗೆ ನೀಡಿ ಕೈತೊಳೆದುಕೊಂಡ ಸರ್ಕಾರ: ಶಾಸಕ ವೇದವ್ಯಾಸ್ ಕಾಮತ್ ಆಕ್ರೋಶ

Prakhara News
1 Min Read

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜಾಹೀರಾತುಗಳ ಟೆಂಡರ್, ಟ್ರಾಫಿಕ್ ಪೊಲೀಸ್ ಬೂತ್ ಹೀಗೆ ಮೊದಲಾದ ವಿಷಯಗಳಲ್ಲಿ ಬೆಂಗಳೂರಿನಲ್ಲಿ ಕೂತವರು, ಪಾಲಿಕೆ ಅಧಿಕಾರಿಗಳು, ಪೊಲೀಸ್ ಇಲಾಖೆ, ಜನಪ್ರತಿನಿಧಿಗಳು, ಸೇರಿದಂತೆ ಯಾರಿಗೂ ಮಾಹಿತಿ ನೀಡದೇ ಏಕಪಕ್ಷೀಯವಾಗಿ ನಡೆದುಕೊಂಡು ತಮಿಳುನಾಡಿನ ವ್ಯಕ್ತಿಯೊಬ್ಬರಿಗೆ ಗುತ್ತಿಗೆ ನೀಡಿ ಕೈ ತೊಳೆದುಕೊಂಡಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಅಧಿವೇಶನದಲ್ಲಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ನೀತಿ ನಿಯಮಗಳನ್ನೆಲ್ಲ ಗಾಳಿಗೆ ತೂರಿ, ತಮಗಿಷ್ಟ ಬಂದ ಹಾಗೆ ಅನ್ಯ ರಾಜ್ಯದವರಿಗೆ ಅನುಕೂಲ ಮಾಡಿಕೊಟ್ಟು, ಇಷ್ಟು ವರ್ಷ ಮಂಗಳೂರಿನಲ್ಲಿ ಪಾಲಿಕೆಗೆ ತೆರಿಗೆ ಸಹಿತ ಕ್ರಮಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳೀಯ ಜಾಹೀರಾತುದಾರರನ್ನು ಕಡೆಗಣಿಸುವ ವ್ಯವಸ್ಥಿತ ಹುನ್ನಾರ ನಡೆದಿದೆ. ಈ ಅನ್ಯಾಯದ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಕ್ಕೆ ಅವರನ್ನು ಬೆದರಿಸುವ ಕೆಲಸವೂ ಆಗುತ್ತಿದೆ. ಪಾಲಿಕೆಗೆ ಜಾಹಿರಾತುಗಳಿಂದಲೇ ಸುಮಾರು ಮೂರೂವರೆ ಕೋಟಿ ಆದಾಯ ಬರುತ್ತಿದ್ದು, ಸರ್ಕಾರ ಮನಸ್ಸು ಮಾಡಿದ್ದರೆ ಹತ್ತು ಕೋಟಿಯವರೆಗೂ ಆದಾಯ ಪಡೆಯಬಹುದು. ಅಂತಹ ಕೆಲಸ ಮಾಡುವುದು ಬಿಟ್ಟು ಭ್ರಷ್ಟಾಚಾರಕ್ಕೆ ಎಡೆಮಾಡಿ ಕೊಡುವಂತೆ ಸರ್ಕಾರವೇ ವರ್ತಿಸಿದರೆ ಹೇಗೆ? ಎಂದು ಪ್ರಶ್ನಿಸಿದರು.

ನಗರ ವ್ಯಾಪ್ತಿಯಲ್ಲಿ ರಸ್ತೆಗೆ ಒಂದು ಹಂಪ್ಸ್ ಹಾಕಬೇಕಾದರೂ ಕೂಡ ಸ್ಥಳೀಯಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಆದರೆ ಇಲ್ಲಿ ಯಾರಿಗೂ ಯಾವುದೇ ಮಾಹಿತಿ ನೀಡದೇ, ನಗರದ ಫುಟ್ಬಾತ್, ರಸ್ತೆ ಅಗಲೀಕರಣಕ್ಕಾಗಿ ಬಿಟ್ಟ ಜಾಗ, ರಾಜಕಾಲುವೆಗಳ ಮೇಲೆ, ಕೊನೆಗೆ ರಸ್ತೆಯ ಮಧ್ಯದಲ್ಲಿಯೂ ಸೇರಿದಂತೆ ಎಲ್ಲೆಂದರಲ್ಲಿ ಟ್ರಾಫಿಕ್ ಪೊಲೀಸ್ ಬೂತ್ ಅಳವಡಿಸಲಾಗಿದೆ. ಅಲ್ಲದೇ ಅದೇ ಪೊಲೀಸ್ ಔಟ್ ಪೋಸ್ಟ್ ಮೇಲೆ ಜಾಹೀರಾತು ನೀಡುವರಿದ್ದರೆ ಸಂಪರ್ಕಿಸಿ ಎಂದು ಬೋರ್ಡ್ ಕೂಡ ಹಾಕಲಾಗಿದೆ. ಬಗ್ಗೆ ಜನರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದು, ಸರ್ಕಾರ ಮಾಡಿದ ತಪ್ಪಿಗೆ ನಾವೇಕೆ ಜವಾಬ್ದಾರರಾಗಬೇಕು? ಎಂದರು. ಇದಕ್ಕೆ ಧ್ವನಿ ಗೂಡಿಸಿದ ಸ್ಪೀಕರ್ ಯು.ಟಿ ಖಾದರ್ ರವರು ನನ್ನ ಕ್ಷೇತ್ರದಲ್ಲಿಯೂ ರಸ್ತೆಯ ಭಾಗದಲ್ಲಿದ್ದ ಟ್ರಾಫಿಕ್ ಪೊಲೀಸ್ ಬೂತ್ ನ್ನು ನಾನೇ ಸೂಚನೆ ನೀಡಿ ತೆರವುಗೊಳಿಸಿದ್ದೇನೆ ಎಂದರು.

Share This Article
Leave a Comment