ಫುಡಾರ್ ಪ್ರತಿಷ್ಠಾನ್ ಹಾಗೂ ಎಮ್.ಸಿ.ಸಿ ಬ್ಯಾಂಕ್ ವತಿಯಿಂದ 65 ವಿಶೇಷ ಸಾಧಕರಿಗೆ ಸನ್ಮಾನ

Prakhara News
2 Min Read

ಮಂಗಳೂರು: ಫುಡಾರ್ ಪ್ರತಿಷ್ಠಾನ್ (ರಿ.) ಸಂಸ್ಥೆಯ ನೇತ್ರತ್ವದಲ್ಲಿ ಕಳೆದ 20 ವರ್ಷಗಳಲ್ಲಿ ಕಥೋಲಿಕ ಕ್ರೈಸ್ಥ ಸಮುದಾಯಕ್ಕೆ ಸೇರಿದ ಮಂಗಳೂರು ಹಾಗೂ ಉಡುಪಿ ಧರ್ಮಪ್ರಾಂತ್ಯದ 3,000 ಕ್ಕೂ ಹೆಚ್ಚು ಶೈಕ್ಷಣಿಕ ಸಾಧಕರನ್ನು ಹಾಗೂ ಕಳೆದ 2 ವರ್ಷಗಳಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳ ಸನ್ಮಾನ ಕಾರ‍್ಯಕ್ರಮ ನೆರವೇರಿಸಿದೆ.

ಈ ಬಾರಿ ಮಂಗಳೂರಿನ ಎಮ್.ಸಿ.ಸಿ ಬ್ಯಾಂಕ್ ಪ್ರಾಯೋಜಕತ್ವದಲ್ಲಿ, ಮತ್ತೊಂದು ಹೊಸ ಮೈಲುಗಲ್ಲಾಗಿ ಕ್ರೀಡೆ, ಕಲೆ ಹಾಗೂ ಇತರೆ ಕ್ಷೇತ್ರಗಳಲ್ಲಿ ಸಾಧನೆಗೈದ 65 ವಿಶೇಷ ಸಾಧಕರನ್ನು ಗುರುತಿಸಿ ಪ್ರತ್ಯೇಕವಾಗಿ ಅಭಿನಂದನಾ ಕಾರ‍್ಯಕ್ರಮವನ್ನು ಮಾರ್ಚ್ 21 ರಂದು ಮಂಗಳೂರಿನ ಎಮ್.ಸಿ.ಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಎಮ್.ಸಿ.ಸಿ ಬ್ಯಾಂಕಿನ ಅಧ್ಯಕ್ಶರಾಗಿರುವ ಸಹಕಾರ ರತ್ನ ಅನಿಲ್ ಲೋಬೊರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಫುಡಾರ್ ಪ್ರತಿಷ್ಠಾನ್ ಸಂಸ್ಥೆಯ ಅಧ್ಯಕ್ಷರಾಗಿರುವ ನೈಜಿಲ್ ಪಿರೇರಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾಸರ್ಕಾರಿ ಪ್ಲೀಡರ್ ಆಗಿರುವ ನ್ಯಾಯವಾದಿ ಎಮ್.ಪಿ ನೊರೊನ್ಹಾ ರವರು ಮುಖ್ಯ ಅತಿಥಿಗಳಾಗಿದ್ದರು.

ಕಥೋಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷರಾಗಿರುವ ಸಂತೋಷ್ ಡಿಸೋಜ ಹಾಗೂ ಉಡುಪಿ ಪ್ರದೇಶದ ಅಧ್ಯಕ್ಷರಾಗಿರುವ ರೊನಾಲ್ಡ್ ಅಲ್ಮೇಡಾ, ಫುಡಾರ್ ಪ್ರತಿಷ್ಠಾನ್ ಕಾರ್ಯದರ್ಶಿ ವಿವಿಡ್ ಡಿಸೋಜಾ, ನಿರ್ದೇಶಕರುಗಳಾದ ರೋರ‍್ಟ್ ಮಿನೇಜಸ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ಸ್ಟ್ಯಾನಿ ಅಲ್ವಾರಿಸ್, ಸಾಹಿತಿ ಹಾಗೂ ಪತ್ರಕರ್ತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಎಚ್. ಎಮ್ ಪರ‍್ನಾಲ್ ಹಾಗೂ ಜನಪ್ರಿಯ ಕೊಂಕಣಿ ಗಾಯಕರಾಗಿರುವ ವಿನ್ಸೆಂಟ್ ಫರ‍್ನಾಂಡಿಸ್ ರವರು ಉಪಸ್ಥಿತರಿದ್ದರು.

ಅನಿಲ್ ಲೋಬೊರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡುತ್ತಾ ಸನ್ಮಾನ ಸ್ವೀಕರಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಮತ್ತು ಅವರ ಹೆತ್ತವರಿಗೂ ಅಭಿನಂದಿಸಿದರು. ಯುವಜನರು ಸ್ವದೇಶದಲ್ಲಿಯೇ ಇದ್ದು ವಿವಿಧ ಕ್ಶೇತ್ರಗಳಲ್ಲಿ ವ್ರತ್ತಿಜೀವನವನ್ನು ಆಯ್ಕೆ ಮಾಡಿ, ಈ ಸಮಾಜಕ್ಕೆ ನಿಮ್ಮ ಕೊಡುಗೆಯನ್ನು ನೀಡುವಂತಾಗಲಿ ಎಂದು ಕಿವಿ ಮಾತು ನುಡಿದರು. ವಿಶೇಷ ಸಾಧನೆ ಮಾಡಿದ ನಿಮ್ಮನ್ನೆಲ್ಲಾ ಪ್ರತ್ಯೇಕವಾಗಿ ಗುರುತಿಸಿ ನಿಮ್ಮ ಸಾಧನೆ ಬೇರೆಯವರಿಗೂ ಪ್ರೇರಣೆಯಾಗಲಿ ಎನ್ನುವ ಉದ್ದೇಶದಿಂದ ಎಮ್.ಸಿ.ಸಿ ಬ್ಯಾಂಕ್ ಈ ಕಾರ‍್ಯಕ್ರಮದಲ್ಲಿ ಫುಡಾರ್ ಪ್ರತಿಶ್ಟಾನ್ ಜೊತೆ ಕೈ ಜೋಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾದ ಎಮ್.ಪಿ ನೊರೊನ್ಹಾ ರವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಮಾತನಾಡುತ್ತಾ ಮಾನವೀಯ ಮೌಲ್ಯಗಳು ಅಳವಡಿಕೊಂಡು ಸಮಾಜದ ಎಲ್ಲಾ ಜನಸಾಮಾನ್ಯರ ಒಳಿತನ್ನು ಬಯಸುವುದಕ್ಕಿಂತ ದೊಡ್ಡ ಸಾಧನೆ ಬೇರೊಂದಿಲ್ಲ. ನಿಮ್ಮ ಹ್ರದಯ ಶ್ರೀಮಂತಿಕೆಯಿಂದ ಇತರರ ಸೇವೆ ಮಾಡಲು ನಿಮ್ಮ ಸಾಧನೆಯು ಮೆಟ್ಟಿಲಾಗಲಿ ಎಂದು ಶುಭ ಹಾರೈಸಿದರು. ಇಂತಹ ಒಂದು ಸುಂದರವಾದ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರತಿಭಾನ್ವಿತರನ್ನು ಸನ್ಮಾನಿಸಿದ ಫುಡಾರ್ ಪ್ರತಿಷ್ಠಾನ್ ಸಂಸ್ಥೆ ಹಾಗೂ ಎಮ್.ಸಿ.ಸಿ ಬ್ಯಾಂಕ್ ಆಡಳಿತ ಮಂಡಳಿಯನ್ನು ಪ್ರಶಂಸಿಸಿದರು.

ಪುರಸ್ಕೃತರ ಪರವಾಗಿ ರೂಬೆನ್ ಮಚಾದೊ. ರೋಶ್ವಿತ ಡಿಸೋಜ ಹಾಗೂ ವಿನಿತಾ ಡೆಸ್ಸಾ ತಮ್ಮ ಯಶಸ್ಸಿನ ಕತೆಯನ್ನು ಹಂಚಿಕೊಳ್ಳುತ್ತಾ, ಸನ್ಮಾನ ಕಾರ್ಯಕ್ರಮ ಆಯೋಜಿಸಿದ ಫುಡಾರ್ ಪ್ರತಿಷ್ಠಾನ್ ಸಂಸ್ಥೆಯನ್ನು ವಂದಿಸಿದರು.

ಸನ್ಮಾನ ಕರ‍್ಯಕ್ರಮ ಯಶಸ್ವಿಗೊಳಿಸಲು ಉದಾರ ಮನಸ್ಸಿನ ಧನ ಸಹಾಯ ನೀಡಿದ ಎಲ್ಲಾ ದಾನಿಗಳನ್ನು, ಕಥೋಲಿಕ್ ಸಭಾ ಮಂಗಳೂರು ಪ್ರದೇಶ, ಉಡುಪಿ ಪ್ರದೇಶ ಹಾಗೂ ಹಾಗೂ ಫುಡಾರ್ ಪ್ರತಿಷ್ಠಾನ್ (ರಿ.) ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಸಹಕಾರವನ್ನು ಸ್ಮರಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ನೋರ್ಬರ್ಟ್ ಮಿಸ್ಕಿತ್ ಹಾಗೂ ಐಡಾ ಫುರ್ಟಾಡೊ ಕಾರ್ಯಕ್ರಮ ನಿರೂಪಿಸಿದರು. ಫುಡಾರ್ ಪ್ರತಿಷ್ಠಾನ್ ಅಧ್ಯಕ್ಶರಾಗಿರುವ ನೈಜಿಲ್ ಪಿರೇರಾ ರವರು ಸ್ವಾಗತ ಕೋರಿದರು. ಕಾರ್ಯದರ್ಶಿ ವಿವಿಡ್ ಡಿಸೋಜರವರು ಧನ್ಯವಾದ ಸಮರ್ಪಣೆ ಮಾಡಿದರು. ನೆರೆದ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

Share This Article
Leave a Comment