ಮಂಜೇಶ್ವರ: ತಂದೆಯಿಂದಲೇ ಮಗಳ ಹತ್ಯೆ, ಆರೋಪಿಯ ಬಂಧನ

Prakhara News
1 Min Read

ಮಂಜೇಶ್ವರ: ತನ್ನ 18 ವರ್ಷದ ಮಗಳನ್ನು ತಂದೆಯೇ ಕಡಿದು ಕೊಲೆಗೈದ ದಾರುಣ ಘಟನೆ ಮಂಜೇಶ್ವರ ಸಮೀಪದ ಕುಂಜತ್ತೂರು ತೂಮಿನಾಡು ಎಂಬಲ್ಲಿ ನಡೆದಿದೆ.

ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ. ತೂಮಿನಾಡಿನ ಜುಮೈಲಾ ಕೊಲೆಗೀಡಾದ ಯುವತಿ. ಕೃತ್ಯ ನಡೆಸಿದ ಆರೋಪದಲ್ಲಿ ತಂದೆ ಉಮ್ಮರ್ ಫಾರೂಕ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಮರ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಪತ್ನಿಯ ಸೋದರಿಯ ಮನೆಯಲ್ಲಿ ವಾಸವಿದ್ದ. ​ಸೋಮವಾರ ಸಂಜೆ 5:30ರ ಹೊತ್ತಿಗೆ, ಉಮರ್ ಮತ್ತು ಆತನ ಬಾವ (ಪತ್ನಿಯ ಸೋದರಿಯ ಪತಿ) ಶೇಕುಂಞ ಎಂಬವರ ನಡುವೆ ಆಸ್ತಿ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಉಮರ್ ಹರಿತ ಆಯುಧದಿಂದ ಶೇಖುಞ್ಞ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ.

ಕಿರುಚಾಟದ ಶಬ್ದ ಕೇಳಿ ಪರಿಸರ ವಾಸಿಗಳು ಸ್ಥಳಕ್ಕೆ ಬಂದಾಗ ಜುಮೈಲಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಜೀವ ಉಳಿಸಲಾಗಲಿಲ್ಲ, ಕೃತ್ಯ ನಡೆಯುವ ಸಮಯದಲ್ಲಿ ತಾಯಿ ಕೂಡಾ ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ.

ವಿದೇಶದಲ್ಲಿದ್ದ ಉಮ್ಮರ್ ಫಾರೂಕ್ ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದು, ಆಸ್ತಿಗಾಗಿ ಕುಟುಂಬದಲ್ಲಿ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment