ಕಾರ್ಕಳದಲ್ಲಿ ಅಂದರ್‌-ಬಾಹರ್ ಜುಗಾರಿ ಅಡ್ಡೆಗೆ ಪೊಲೀಸರ ದಾಳಿ : 8 ಮಂದಿ ಅಂದರ್‌..!!

Prakhara News
1 Min Read

ಕಾರ್ಕಳ: ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜುಗಾರಿ ಆಟ ನಡೆಯುತ್ತಿದ್ದ ಅಡ್ಡೆಗೆ ಕಾರ್ಕಳ ನಗರ ಪೊಲೀಸರು ದಾಳಿ ನಡೆಸಿದ್ದು, 8 ಮಂದಿಯನ್ನು ದಸ್ತಗಿರಿ ಮಾಡಿರುವ ಘಟನೆ ನಡೆದಿದೆ.

ಫೆಬ್ರವರಿ 7ರ ರಾತ್ರಿ ಸುಮಾರು 8 ಗಂಟೆ 45 ನಿಮಿಷದ ವೇಳೆಗೆ, ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಬೈಲ್ ಬೆಟ್ಟು ಪ್ರದೇಶದಲ್ಲಿರುವ ಸಾದ್ವಿನ್ ಎಂಬುವರ ಮನೆಯ ಮೊದಲ ಮಹಡಿಯಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿರಿಸಿ ಇಸ್ಪೀಟ್ ಎಲೆಗಳಿಂದ ಅಂದರ್-ಬಾಹರ್ ಎಂಬ ಜುಗಾರಿ ಆಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮುರುಳೀಧರ ನಾಯ್ಕ್ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿದೆ.

ದಾಳಿಯ ವೇಳೆ 22,690 ರೂಪಾಯಿ ನಗದು, 52 ಇಸ್ಪೀಟ್ ಎಲೆಗಳು, 16 ಹೊಸ ಇಸ್ಪೀಟ್ ಎಲೆಗಳ ಪ್ಯಾಕೆಟ್, 10 ಪ್ಲಾಸ್ಟಿಕ್ ಕುರ್ಚಿ, 4 ಪ್ಲಾಸ್ಟಿಕ್ ಟೇಬಲ್ ಹಾಗೂ 9 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಉಮ್ಮರ ಫಾರೂಕ್, ಅಬ್ದುಲ್ ಅಜೀಜ್, ಸತೀಶ ಎಸ್ ಪ್ರಭು, ಅಬ್ದುಲ್ ರಹಿಮಾನ್, ಸಮೀರ್, ಸುಲೇಮಾನ್, ಇರ್ಪಾನ್ ಹಾಗೂ ಚೇತಕ್ ಸೇರಿದಂತೆ 8 ಆರೋಪಿಗಳನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇನ್ನು ದಾಳಿ ವೇಳೆ ಮೂವರು ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸ್ ತಂಡ ಕಾರ್ಯಾಚರಣೆ ನಡೆಸುತ್ತಿದೆ.ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/26 ಅಡಿಯಲ್ಲಿ ಕೆಪಿ ಆಕ್ಟ್ ಹಾಗೂ ಬಿಎನ್‌ಎಸ್ ಕಲಂಗಳಂತೆ ಪ್ರಕರಣ ದಾಖಲಾಗಿದೆ

Share This Article
Leave a Comment