ಉಡುಪಿ: ಕುಕ್ಕುಂದೂರು ಗ್ರಾಮದ ನಕ್ರೆ ಹಾಂಕ್ರಾಡಿ ಎಂಬಲ್ಲಿ ಅಕ್ರಮವಾಗಿ ಸ್ಪೋಟಕಗಳನ್ನು ಬಳಸಿ ಕಲ್ಲುಬಂಡೆಗಳನ್ನು ಒಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಕಾರ್ಕಳ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರ ನಿವಾಸಿ ಟಿ.ರವಿಚಂದ್ರ (55 ) ಹಾಗೂ ಆತನ ಮಗ ಪವನ್ ಕುಮಾರ್(31) ಬಂಧಿತ ಆರೋಪಿಗಳು. ಇವರು ಜ.21ರಂದು ಅಕ್ರಮವಾಗಿ ಸ್ಪೋಟಕವನ್ನು ಬಳಸಿ ಕಲ್ಲು ಬಂಡೆಗಳನ್ನು ಒಡೆದಿರುವ ಕುರಿತ ಮಾಹಿತಿಯಂತೆ ಕಾರ್ಕಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ನಂತರ ಸೀನ್ ಆಫ್ ಕ್ರೈಮ್ ಆಫೀಸರನ್ನು ಕರೆಸಿ ಸ್ಥಳ ಪರಿಶೀಲನೆ ನಡೆಸಿದ್ದು, ಅವರು ನೀಡಿದ ವರದಿಯಲ್ಲಿ, ಬಂಡೆ ಒಡೆಯಲು ಸ್ಪೋಟಕಗಳನ್ನು ಬಳಸಿರುವುದು ತಿಳಿಸಲಾಗಿದೆ. ಅದರಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

