ಮಂಗಳೂರು: ಬ್ಯಾಂಕ್ ಖಾತೆ ಪಡೆದು ಸೈಬರ್ ವಂಚನೆಗೆ ಬಳಕೆ ಮಾಡಿ ಬಳಿಕ ಅಕೌಂಟ್ ಕೊಟ್ಟ ಯುವಕನಿಗೆ ಬೆದರಿಕೆ

Prakhara News
1 Min Read

ಮಂಗಳೂರು : ಟ್ರೇಡಿಂಗ್ ವ್ಯವಹಾರದ ಹೆಸರಿನಲ್ಲಿ ಯುವಕನೊಬ್ಬನ ಬ್ಯಾಂಕ್ ಖಾತೆಯನ್ನು ಪಡೆದು, ಅದನ್ನು ಸೈಬರ್ ವಂಚನೆಗೆ ಬಳಸಿಕೊಂಡಿದ್ದಲ್ಲದೆ, ಹಣಕ್ಕಾಗಿ ಬೆದರಿಕೆ ಹಾಕಿದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಅನೀಶ್ ಮತ್ತು ಸಲೀತ್ ಅಹಮ್ಮದ್ ಎಂ. ಎಂಬವರ ವಿರುದ್ಧ ದೂರು ದಾಖಲಾಗಿದೆ.

ಘಟನೆಯ ವಿವರ: 27 ವರ್ಷದ ಯುವಕ ಬಿಜೈ ಕಾಪಿಕಾಡ್ ಶಾಖೆಯ ಇಂಡಿಯನ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಆರೋಪಿಗಳಾದ ಅನೀಶ್ ಮತ್ತು ಸಲೀತ್, ಟ್ರೇಡಿಂಗ್‌ಗಾಗಿ ಹಣ ವರ್ಗಾವಣೆ ಮಾಡಲು ಬ್ಯಾಂಕ್ ಖಾತೆ ಬೇಕೆಂದು ನಂಬಿಸಿ ಫಿರ್ಯಾದಿದಾರರಿಂದ ಬ್ಯಾಂಕ್ ಪಾಸ್ ಬುಕ್, ಚೆಕ್ ಬುಕ್, ಎಟಿಎಂ ಕಾರ್ಡ್ ಹಾಗೂ ಲಿಂಕ್ ಆಗಿದ್ದ ಸಿಮ್ ಕಾರ್ಡ್‌ ಪಡೆದುಕೊಂಡಿದ್ದರು.

ಖಾತೆ ಫ್ರೀಜ್ ಆದಾಗ ಬಯಲಾದ ವಂಚನೆ: ಕೆಲ ದಿನಗಳ ನಂತರ ಸಂಶಯಗೊಂಡು ಯುವಕ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ, ಅವರ ಖಾತೆಯ ಮೇಲೆ ವಿವಿಧ ರಾಜ್ಯಗಳಲ್ಲಿ ಸೈಬರ್ ಕ್ರೈಂ ದೂರುಗಳು ದಾಖಲಾಗಿರುವುದು ಮತ್ತು ಖಾತೆ ಫ್ರೀಜ್‌ ಆಗಿರುವುದು ತಿಳಿದುಬಂದಿದೆ. ಈ ಬಗ್ಗೆ ಆರೋಪಿಗಳನ್ನು ಪ್ರಶ್ನಿಸಿದಾಗ, ಅವರು ದಾಖಲೆಗಳನ್ನು ವಾಪಸ್ ನೀಡದೆ ಉಲ್ಟಾ ಬೆದರಿಕೆ ಹಾಕಿದ್ದಾರೆ. “ನೀನೇ ನಮಗೆ ಖಾತೆ ನೀಡಿದ್ದೀಯ ಎಂದು ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ” ಎಂದು ಹೆದರಿಸಿ, ಪ್ರಕರಣ ಮುಚ್ಚಿ ಹಾಕಲು 10,000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಬ್ಯಾಂಕ್ ದಾಖಲೆಗಳನ್ನು ಮರಳಿ ಕೇಳಿದರೆ ಜೀವಸಹಿತ ಬಿಡುವುದಿಲ್ಲ ಎಂದು ಆರೋಪಿಗಳು ಜೀವಭಯ ಹಾಕಿದ್ದಾರೆ ಎಂದು ಫಿರ್ಯಾದಿದಾರರು ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳು ಇತರ ಸೈಬರ್ ಅಪರಾಧಿಗಳೊಂದಿಗೆ ಕೈಜೋಡಿಸಿ ಲಕ್ಷಾಂತರ ರೂಪಾಯಿ ವಂಚನೆಯ ಹಣವನ್ನು ಈ ಖಾತೆಯ ಮೂಲಕ ವರ್ಗಾವಣೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

Share This Article
Leave a Comment