ಮಂಗಳೂರಿನಲ್ಲಿ ರಸ್ತೆ ಅಪಘಾತ ಪ್ರಕರಣ ಇಳಿಕೆ -ಡಿಸಿಪಿ ರವಿಶಂಕರ್

Prakhara News
1 Min Read

ಮಂಗಳೂರು : ಕಳೆದ ಒಂದು ವರ್ಷದ ಅಂಕಿ ಅಂಶಗಳನ್ನು ಗಮನಿಸಿದಾಗ ಮಂಗಳೂರಿನಲ್ಲಿ ರಸ್ತೆ ಅಪಘಾತ ಮತ್ತು ಅಪರಾಧ ಪ್ರಕರಣಗಳಲ್ಲಿ ಸಾಕಷ್ಟು ಇಳಿಕೆಯಾಗಿರುವುದು ಉತ್ತಮ ಬೆಳವಣಿಗೆ ಎಂದು ಮಂಗಳೂರು ಉಪ ಪೊಲೀಸ್ ಆಯುಕ್ತ ರವಿಶಂಕರ್ ತಿಳಿಸಿದರು.


ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ದ.ಕ.ಬಸ್ ಮಾಲೀಕರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಗುರುವಾರ‌ ನಡೆದ ಪತ್ರಕರ್ತರಿಗೆ ಉಚಿತ ಖಾಸಗಿ ಬಸ್ ಪಾಸ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಪತ್ರಕರ್ತರು ತಮ್ಮ
ವೃತ್ತಿ ಬದುಕಿನಲ್ಲಿ ಕಲವು ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸುಳ್ಳು ಸುದ್ದಿಗಳಿಂದ ನಾಡಿನ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಈ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಿ ಕಾರ್ಯ ನಿರ್ವಹಿಸುತ್ತಿರುವ ದ.ಕ.ಜಿಲ್ಲೆಯ ಪತ್ರಕರ್ತರ ಹೊಣೆಗಾರಿಕೆ ಶ್ಲಾಘನೀಯ ಎಂದರು.


ಮುಖ್ಯ ಅತಿಥಿಯಾಗಿದ್ದ ಆರ್‌ಟಿಒ ಶ್ರೀಧರ್ ಮಲ್ಲಾಡ್ ಮಾತನಾಡಿ ‘ ನಗರದ ಟ್ರಾಫಿಕ್ ವ್ಯವಸ್ಥೆಗೆ ಅತ್ಯಾಧುನಿಕ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ರಸ್ತೆ ನಿಯಮ ಉಲ್ಲಂಘನೆಯಾಗದಂತೆ ಚಾಲಕರು ಎಚ್ಚರ ವಹಿಸಬೇಕು ಎಂದರು.


ದ.ಕ.ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪ್ಪಾಡಿ ಮಾತನಾಡಿ ಪತ್ರಕರ್ತರ ಸೇವೆಯನ್ನು ಗೌರವಿಸಿ ಉಚಿತ ಬಸ್ ಪಾಸ್
ಸೌಲಭ್ಯವನ್ನು ಸಂಘದ ವತಿಯಿಂದ ಒದಗಿಸಲಾಗಿದೆ ಎಂದರು.


ಅಪಘಾತ ರಹಿತ ಚಾಲನೆಗಾಗಿ ಬಸ್ ಚಾಲಕರಾದ ಧರ್ಮಪಾಲ ಉಳ್ಳಾಲ್,ಮೋಹನ್ ಮತ್ತು ಅರುಣ್ ಕುಮಾರ್ ಅವರನ್ನು ಇದೇ
ಸಂದರ್ಭ ಸನ್ಮಾನಿಸಲಾಯಿತು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ,ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಬಸ್ ಮಾಲೀಕರ ಸಂಘದ ಉಪಾಧ್ಯಕ್ಷ ರಾಮಚಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್,ಜತೆ ಕಾರ್ಯದರ್ಶಿ ರಾಜೇಶ್‌ಟಿ,ಪೂರ್ವಾಧ್ಯಕ್ಷ ನೆಲ್ಸನ್ ಪಿರೇರಾ ಉಪಸ್ಥಿತರಿದ್ದರು.


ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.

Share This Article
Leave a Comment