ಬಂಟ್ವಾಳ: ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಉಳ್ಳಾಲ ಸಜಿಪ ಪಡು ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಪರಸ್ಪರ ದೂರುಗಳ ಆಧಾರದ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.


ಮೊದಲ ಪ್ರಕರಣದಲ್ಲಿ ಅಬ್ದುಲ್ ನವಾಝ್ (42) ಅವರು ನೀಡಿದ ದೂರಿನಂತೆ, ಮಾರ್ಚ್ 22ರ ಬೆಳಿಗ್ಗೆ ತಲೆಮೊಗರು ಮಸೀದಿಯಿಂದ ವಾಪಸ್ಸು ಬರುತ್ತಿದ್ದ ವೇಳೆ ಶೌಕತ್ ಅವರ ಅಂಗಡಿ ಬಳಿ ಕೆಲವರು ಗುಂಪಾಗಿ ನಿಂತು ಮಸೀದಿ ವಿಚಾರದಲ್ಲಿ ತಕರಾರು ತೆಗೆದು, ನಿಂದಿಸಿ, ಕತ್ತಿ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ಗಾಯಗೊಂಡವರು ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಅ.ಕ್ರ. 46/2026 ಪ್ರಕರಣ ದಾಖಲಾಗಿದೆ.

ಇದಕ್ಕೆ ಪ್ರತಿಯಾಗಿ ಅಬ್ದುಲ್ ಗಫೂರ್ (48) ಅವರು ನೀಡಿದ ದೂರಿನಲ್ಲಿ ತಲೆಮೊಗರು ಮಸೀದಿ ಬಳಿ ತಮ್ಮನ್ನು ತಡೆದು ನಿಲ್ಲಿಸಿ ಬೈದು, ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಅ.ಕ್ರ. 47/2026 ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಶೌಕತ್ ಆಲಿ (40) ಅವರು ನೀಡಿದ ದೂರಿನಂತೆ, ತಮ್ಮ ಅಂಗಡಿಗೆ ಬಂದ ಕೆಲವರು ಮಸೀದಿ ವಿಚಾರದಲ್ಲಿ ತಕರಾರು ತೆಗೆದು ಅವರ ಸಂಬಂಧಿಗೆ ಹಲ್ಲೆ ನಡೆಸಿದ್ದು, ಗಲಾಟೆ ಬಿಡಿಸಲು ಬಂದವರ ಮೇಲೂ ದಾಳಿ ನಡೆಸಿ, ತಲವಾರಿನಿಂದ ಹಲ್ಲೆ ಯತ್ನಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಅ.ಕ್ರ. 48/2026 ಪ್ರಕರಣ ದಾಖಲಾಗಿದೆ.
ಮೂರು ಪ್ರಕರಣಗಳಲ್ಲೂ ವಿವಿಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ವಿಧಿಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಲಾಟೆಯಲ್ಲಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಯಾರಿಗೂ ಪ್ರಾಣಾಪಾಯ ಉಂಟಾಗುವಷ್ಟು ಗಂಭೀರ ಗಾಯಗಳಿಲ್ಲ ಎಂದು ತಿಳಿದುಬಂದಿದೆ. ಗಾಯಾಳುಗಳು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


