ಬಜಪೆ ಶ್ರೀ ರಾಮಾಂಜನೇಯ ದೇವಸ್ಥಾನದ ಕಾಣಿಕೆ ಹುಂಡಿ ಒಡೆದು ಹಣ ಕಳವು : ಅಂತಾರಾಜ್ಯದ ಕಳ್ಳನ ಬಂಧನ.

Prakhara News
1 Min Read

ಮಂಗಳೂರು : ದೇವಸ್ಥಾನದ ಕಾಣಿಕೆ ಹುಂಡಿ ಒಡೆದು ಹಣ ಕಳವು ಮಾಡಿದ್ದ ಅಂತಾರಾಜ್ಯ ಕಳ್ಳನನ್ನು ಬಜಪೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಮಾರ್ಚ್ 3, 2026 ರಂದು ನಡೆದ ಕಳವು ಪ್ರಕರಣವು ಇದೀಗ ಬೆಳಕಿಗೆ ಬಂದಿದೆ. ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಮೂರು ಕಾಣಿಕೆ ಹುಂಡಿಗಳಲ್ಲಿದ್ದ ಸುಮಾರು ₹25,000 ನಗದು ಹಣವನ್ನು ಕಳವು ಮಾಡಿದ್ದರು. ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಗಂಭೀರವಾಗಿ ಕೈಗೊಂಡ ಪೊಲೀಸರು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿದರು. ಖಚಿತ ಮಾಹಿತಿ ಆಧರಿಸಿ, ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯ ನಿವಾಸಿಯಾದ 25 ವರ್ಷದ ಶಬಿಕ್ ಅಹಮ್ಮದ್ ಶೇಖ್ ಅಬ್ದುಲ್ ಖಾದರ್ ಅವರನ್ನು ಮಾರ್ಚ್ 31, 2026 ರಂದು ಬಂಧಿಸಲಾಯಿತು.

ಪೊಲೀಸರ ವಿಚಾರಣೆಯಲ್ಲಿ ಆರೋಪಿತನು ದೇವಸ್ಥಾನದ ಕಾಣಿಕೆ ಹುಂಡಿಯ ಹಣ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ, ಕಳುವಾಗಿದ್ದ ಕಾಣಿಕೆ ಹುಂಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನು ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿಯೂ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಇದೇ ವರ್ಷದ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಕೂರು–ಜೊಕಟ್ಟೆ ಪ್ರದೇಶದಲ್ಲಿ ನಡೆದ ಪ್ಯಾಷನ್ ಪ್ರೋ ಬೈಕ್ ಕಳವು ಪ್ರಕರಣದಲ್ಲಿಯೂ ಅವನ ಪಾತ್ರವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿತನು ತಮಿಳುನಾಡಿನಿಂದ ರೈಲಿನಲ್ಲಿ ಮಂಗಳೂರಿಗೆ ಬಂದು ಕಳವು ಮಾಡಿ, ಬಳಿಕ ಮತ್ತೆ ತಮಿಳುನಾಡಿಗೆ ತೆರಳಿ ತಪ್ಪಿಸಿಕೊಳ್ಳುವ ವಿಧಾನವನ್ನು ಅನುಸರಿಸುತ್ತಿದ್ದನು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

Share This Article
Leave a Comment