ಮಂಗಳೂರು ವಿಮಾನ ನಿಲ್ದಾಣದ ಟ್ಯಾಕ್ಸಿ ಶುಲ್ಕ ಏರಿಕೆ ಕಡಿತಕ್ಕೆ ಆಗ್ರಹಿಸಿ: ಕೇಂದ್ರ ವಿಮಾನಯಾನ ಸಚಿವರಿಗೆ ಪತ್ರ ಬರೆದ ಸಂಸದ ಕೋಟ ಶ್ರೀನಿವಾಸ ಪೂಜಾರಿ

Prakhara News
1 Min Read

ಉಡುಪಿ: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಡಿಗೆ ವಾಹನಗಳ ಪಾರ್ಕಿಂಗ್ ಮತ್ತು ಪಿಕಪ್ ಶುಲ್ಕವನ್ನು ಅವೈಜ್ಞಾನಿಕವಾಗಿ ಏರಿಕೆ ಮಾಡಿರುವುದರಿಂದ ಬಡ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರಿಗೆ ಭಾರಿ ಆರ್ಥಿಕ ಹೊರೆಯಾಗುತ್ತಿದ್ದು, ತಕ್ಷಣವೇ ಈ ಶುಲ್ಕ ಏರಿಕೆಯನ್ನು ಹಿಂಪಡೆಯುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು ಅವರಿಗೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪತ್ರ ಬರೆದು ಮನವಿ ಮಾಡಿದ್ದಾರೆ.

ಶುಲ್ಕ ಏರಿಕೆಯನ್ನು ವಿರೋಧಿಸಿ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ಕಳೆದ ಮೂರು ದಿನಗಳಿಂದ ಮಂಗಳೂರು ವಿಮಾನ ನಿಲ್ದಾಣದ ಎದುರು ನಿರಂತರ ಧರಣಿ ನಡೆಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಟ್ಯಾಕ್ಸಿ ಚಾಲಕರ ಹಿತದೃಷ್ಟಿಯಿಂದ ಶುಲ್ಕವನ್ನು ಇಳಿಸಿ, ಈ ಹಿಂದಿನ ದರವನ್ನೇ ಮುಂದುವರಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ಈ ಹಿಂದೆ ವಿಮಾನ ನಿಲ್ದಾಣ ಪ್ರವೇಶಿಸುವ ಟ್ಯಾಕ್ಸಿಗಳಿಗೆ 100 ರೂಪಾಯಿ ಶುಲ್ಕ ಇದ್ದು ಇದೀಗ ಯಾವುದೇ ಸೂಚನೆ ಇಲ್ಲದೆ 180 ರಿಂದ 500 ರೂಪಾಯಿವರೆಗೆ ಏರಿಸಿದ್ದು, ಪ್ರಯಾಣಿಕರನ್ನು ಕರೆದೊಯ್ಯಲು ಬರುವ ವಾಹನಗಳಿಗೂ ಈ ಶುಲ್ಕ ವಿಧಿಸಲಾಗುತ್ತಿದೆ. ಅದಲ್ಲದೆ 10 ನಿಮಿಷ ಉಚಿತ ಸೌಲಭ್ಯವನ್ನು ಸಹ ರದ್ದು ಮಾಡಿ ಟ್ಯಾಕ್ಸಿ ಚಾಲಕರಿಗೆ ಹೆಚ್ಚುವರಿ ಶುಲ್ಕ ಕೇಳಲಾಗಿದೆ ಎಂಬ ಟ್ಯಾಕ್ಸಿ ಚಾಲಕರ ಮನವಿಯನ್ನು ಪತ್ರದಲ್ಲಿ ಉಲ್ಲೇಖಿಸಿ, ಬೆಂಗಳೂರು ವಿಮಾನ ನಿಲ್ದಾಣಕ್ಕಿಂತಲೂ ನಮಗೆ ಹೆಚ್ಚು ಶುಲ್ಕ ವಿಧಿಸಲಾಗುತ್ತಿದೆ ಎಂಬ ಚಾಲಕರ ದೂರನ್ನು ಪತ್ರದಲ್ಲಿ ವಿವರಿಸಿದ್ದೇನೆ.

ಆರ್ಥಿಕವಾಗಿ ಬಡವರಾದ ಟ್ಯಾಕ್ಸಿ ಮಾಲಕ ಚಾಲಕರ ಸಮಸ್ಯೆಯನ್ನು ಅರ್ಥೈಸಿಕೊಂಡು ತಾವು ಮಧ್ಯಪ್ರವೇಶಿಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಡಿಗೆ ನಡೆಸಿ ಬದುಕುವ ಟ್ಯಾಕ್ಸಿ ಮ್ಯಾನ್ ಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಪತ್ರದ ಮೂಲಕ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ.

Share This Article
Leave a Comment