‘ನಾನು ಪಕ್ಕಾ ಹಿಂದೂವಾದಿ’ ಎಂದು ನಂಬಿಸಿದ್ದರಿಂದ ಪುತ್ತೂರಿನಲ್ಲಿ ಬಿಜೆಪಿಗೆ ಸೋಲು – ಆರ್. ಅಶೋಕ್ ಹೇಳಿಕೆಗೆ ಅರುಣ್ ಕುಮಾರ್ ಪುತ್ತಿಲ ತಿರುಗೇಟು..!

Prakhara News
1 Min Read

ಪುತ್ತೂರು: ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಹಿಂದೂ, ಹಿಂದೂ ಎನ್ನುವ ಕಾರಣಕ್ಕೆ ಬಿಜೆಪಿಗೆ ಸೋಲಾಯಿತು’’ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಹೇಳಿಕೆಗೆ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಪ್ರತಿಕ್ರಿಯೆ ನೀಡಿದ್ದಾರೆ.

‘‘ಅಶೋಕ್ ಅವರು ಯಾರ ಬಗ್ಗೆ ಆ ರೀತಿ ಮಾತನಾಡಿದ್ದಾರೆ ಎಂಬುದನ್ನು ಅವರಲ್ಲೇ ಕೇಳಬೇಕು. ಆದರೆ, ನಾನು ಕಳೆದ 35 ವರ್ಷಗಳಿಂದ ಧರ್ಮದ ವಿಚಾರದಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ’’ ಎಂದು ಪುತ್ತಿಲ ತಿರುಗೇಟು ನೀಡಿದ್ದಾರೆ.

ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಅರುಣ್ ಕುಮಾರ್ ಪುತ್ತಿಲ, ‘‘ಧರ್ಮದ ವಿರುದ್ಧ ಕೆಲಸ ನಡೆದಾಗ, ಧಾರ್ಮಿಕ ಶ್ರದ್ಧಾಕೇಂದ್ರಗಳ ವಿರುದ್ಧ ಷಡ್ಯಂತ್ರ ನಡೆದಾಗ, ಹಿಂದೂಗಳ ಪೂಜ್ಯ ಗೋಮಾತೆಯ ಹತ್ಯೆಯ ವಿಚಾರ ಬಂದಾಗ ಹಾಗೂ ‘ಲವ್ ಜಿಹಾದ್’ ಮೂಲಕ ಹಿಂದೂ ಹೆಣ್ಣುಮಕ್ಕಳನ್ನು ಮೋಸದ ಜಾಲದಲ್ಲಿ ಸಿಲುಕಿಸಿದಾಗ ಅದರ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ ಮತ್ತು ಹೋರಾಟ ಮಾಡಿದ್ದೇನೆ’’ ಎಂದರು.
‘ನನ್ನ ಜೀವನದ ಕೊನೆಯ ದಿನದ ತನಕವೂ ಹಿಂದುತ್ವಕ್ಕಾಗಿ ಕೆಲಸ ಮಾಡುತ್ತೇನೆ. ಬೇರೆ ಯಾವುದೇ ಅಧಿಕಾರ ಅಥವಾ ಸ್ಥಾನಮಾನದ ಅಪೇಕ್ಷೆಗಾಗಿ ಹಿಂದೆಯೂ ಕೆಲಸ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ’’ ಎಂದು ಅವರು ಸ್ಪಷ್ಟಪಡಿಸಿದರು.

ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳ ಕುರಿತು ಮಾತನಾಡಿದ ಅವರು, ‘‘ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯಕರ್ತರ ಅಭಿಪ್ರಾಯದಂತೆ ಈಗಾಗಲೇ ಸಭೆ ನಡೆಸಿ ಚರ್ಚಿಸಲಾಗಿದೆ. ಮುಂಬರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಬೂತ್ ಮಟ್ಟದ ಆಕಾಂಕ್ಷಿಗಳಿಗೆ ಅವಕಾಶ ನೀಡಲಾಗುವುದು’’ ಎಂದು ತಿಳಿಸಿದರು.

Share This Article
Leave a Comment