ಮಂಡ್ಯ: ಕೊಲೆಯಾಗಿದ್ದಾಳೆ ಎಂದು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದ ಮಹಿಳೆಯೊಬ್ಬಳು ಬರೋಬ್ಬರಿ ಏಳು ವರ್ಷಗಳ ನಂತರ ಜೀವಂತವಾಗಿ ಪತ್ತೆಯಾಗಿರುವ ಅಚ್ಚರಿಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.


ಪೊಲೀಸ್ ತನಿಖೆಯ ಈ ಗಂಭೀರ ವೈಫಲ್ಯದಿಂದಾಗಿ ಮಾಡದ ತಪ್ಪಿಗೆ ಅಮಾಯಕ ಯುವಕನೊಬ್ಬ ಎರಡೂವರೆ ವರ್ಷಗಳ ಕಾಲ (30 ತಿಂಗಳು) ಜೈಲು ಶಿಕ್ಷೆ ಅನುಭವಿಸುವಂತಾಗಿದೆ.

2019ರ ಜೂನ್‌ನಲ್ಲಿ ಪಾಂಡವಪುರ ಪಟ್ಟಣದಿಂದ ನಾಪತ್ತೆಯಾಗಿದ್ದ ಮಂಜು ಎನ್. (35) ಎಂಬ ಮಹಿಳೆ, ಬುಧವಾರ ನಾಗಮಂಗಲ ತಾಲ್ಲೂಕಿನ ಮಾಯಿಗೋನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದ್ದಾರೆ. ಚಾಮರಾಜನಗರ ಮೂಲದ ನಾಗೇಂದ್ರ ಎಂಬುವವರನ್ನು ವಿವಾಹವಾಗಿರುವ ಅವರು, ಅವರೊಂದಿಗೆ ಸಂಸಾರ ನಡೆಸುತ್ತಿದ್ದರು. ಈ ಬೆಳವಣಿಗೆಯಿಂದಾಗಿ ಮಂಜು ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಸುಮಾರು ಎರಡೂವರೆ ವರ್ಷ ಜೈಲಿನಲ್ಲಿ ಕಳೆದಿದ್ದ ರಾಗಿಮುದ್ದನಹಳ್ಳಿ ಗ್ರಾಮದ ರಾಜೇಶ್ ಎಂ.ಆರ್. ಅಲಿಯಾಸ್ ಕಾಳ (36) ಅವರಿಗೆ ದೊಡ್ಡ ನಿರಾಳ ಸಿಕ್ಕಂತಾಗಿದೆ. 2019ರ ಜೂನ್‌ನಲ್ಲಿ ಮಂಜು ನಾಪತ್ತೆಯಾದ ಕುರಿತು ಆಕೆಯ ತಂದೆ ನಾಗರಾಜು ಪಾಂಡವಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎರಡು ವರ್ಷಗಳ ಬಳಿಕ, ರಾಜೇಶ್ ಎಂ.ಆರ್. ಎಂಬುವವರು ಮಂಜುಳನ್ನು ಕೊಲೆ ಮಾಡಿ ಕಾವೇರಿ ನದಿಗೆ ಎಸೆದಿದ್ದಾರೆ ಎಂದು ನಾಗರಾಜು ಕೊಲೆ ದೂರು ನೀಡಿದ್ದರು.

ನಾಪತ್ತೆಯಾಗುವ ದಿನ ಪಾಂಡವಪುರ ಬಸ್ ನಿಲ್ದಾಣದಲ್ಲಿ ಅಪರಿಚಿತರಾಗಿದ್ದ ರಾಜೇಶ್ ಅವರ ಮೊಬೈಲ್ ಫೋನ್ ಪಡೆದು ಮಂಜು ಕೊನೆಯ ಕರೆ ಮಾಡಿದ್ದರು. ಇದೇ ಕಾಲ್ ರೆಕಾರ್ಡ್ (CDR) ಆಧಾರದ ಮೇಲೆ 2021ರಲ್ಲಿ ಪೊಲೀಸರು ರಾಜೇಶ್ ಅವರನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದರು. ಸುಮಾರು 30 ತಿಂಗಳುಗಳ ಕಾಲ ಜೈಲಿನಲ್ಲಿದ್ದ ರಾಜೇಶ್ 2024ರಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದರು.
ಇತ್ತೀಚೆಗೆ ರಾಜೇಶ್ ಪರ ವಕೀಲ ನಟೇಶ್ ಅವರಿಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಪರಿಶೀಲನೆ ನಡೆಸಿದಾಗ, ನಾಗಮಂಗಲ ತಾಲ್ಲೂಕಿನ ಮಾಯಿಗೋನಹಳ್ಳಿ ಗ್ರಾಮದಲ್ಲಿ ಮಂಜು ಜೀವಂತವಾಗಿ ಪತ್ತೆಯಾಗಿದ್ದಾರೆ.

ಮನೆಯವರು ನನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಲು ಮುಂದಾಗಿದ್ದರಿಂದ ತಾನೇ ಮನೆ ಬಿಟ್ಟು ಹೋಗಿದ್ದೆ. ಬಳಿಕ ನಾಗೇಂದ್ರ ಎಂಬುವವರನ್ನು ಮದುವೆಯಾಗಿ ಸುಮಾರು ಒಂದು ವರ್ಷ ತಮಿಳುನಾಡಿನಲ್ಲಿ ನೆಲೆಸಿದ್ದೆವು. ಇತ್ತೀಚೆಗೆ ಮಾಯಿಗೋನಹಳ್ಳಿಗೆ ಬಂದು ವಾಸವಿದ್ದೆವು” ಎಂದು ಮಂಜು ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೆ, ತನಗೆ ರಾಜೇಶ್ ಎಂಬ ವ್ಯಕ್ತಿಯ ಪರಿಚಯವೇ ಇಲ್ಲ ಎಂದಿರುವ ಮಂಜು, ಪ್ರಕರಣದ ಸತ್ಯಾಸತ್ಯತೆ ತಿಳಿಸಲು ಯಾವುದೇ ಪ್ರಾಧಿಕಾರದ ಮುಂದೆ ಹೇಳಿಕೆ ನೀಡಲು ಸಿದ್ಧವಿರುವುದಾಗಿ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಮಂಜು ಪತ್ತೆಯಾದ ಬೆನ್ನಲ್ಲೇ, ಅಂದಿನ ಪಾಂಡವಪುರ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭಾಕರ್ ವಿರುದ್ಧ ರಾಜೇಶ್ ಗಂಭೀರ ಆರೋಪ ಮಾಡಿದ್ದಾರೆ. ಸುಳ್ಳು ತಪ್ಪೊಪ್ಪಿಗೆ ಪಡೆಯಲು ಪೊಲೀಸರು ತೀವ್ರ ಹಲ್ಲೆ ನಡೆಸಿ, ಖಾಸಗಿ ಅಂಗಗಳಿಗೆ ವಿದ್ಯುತ್ ಶಾಕ್ ನೀಡಿದ್ದರು ಎಂದು ಕಣ್ಣೀರು ಹಾಕಿದ್ದಾರೆ. ಏತನ್ಮಧ್ಯೆ, ಮಂಜು ಜೀವಂತವಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ರಾಜೇಶ್ ಅವರ ತಂದೆ ರಮೇಶ್ ಬುಧವಾರ ಬಿಂಡಿಗನವಿಲೆ ಪೊಲೀಸ್ ಠಾಣೆಗೆ ತೆರಳಿ, ತಮ್ಮ ಮಗನಿಗೆ ರಕ್ಷಣೆ ನೀಡಬೇಕು ಮತ್ತು ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ ಮಂಜು ಅವರನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಹಿಂದಿನ ಕೊಲೆ ತನಿಖೆಯಲ್ಲಿ ನಡೆದಿರುವ ಗಂಭೀರ ಲೋಪಗಳ ಕುರಿತು ಸಮಗ್ರ ವಿಚಾರಣೆ ನಡೆಸಲು ಶ್ರೀರಂಗಪಟ್ಟಣ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆಗೆ ಮಂಡ್ಯ ಎಸ್‌ಪಿ ಡಾ. ವಿ.ಜೆ. ಶೋಭಾರಾಣಿ ಆದೇಶಿಸಿದ್ದಾರೆ.


