ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಶೇಷ ತನಿಖಾ ತಂಡದ (ಎಸ್ಐಟಿ) ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಹಿರಿಯ ಐಪಿಎಸ್ ಅಧಿಕಾರಿ, ಐಜಿಪಿ ಎನ್. ಶಶಿಕುಮಾರ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಎಂ.ಎ. ಸಲೀಂ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.


ಸೌಜನ್ಯ ಸಾವಿಗೆ ನ್ಯಾಯ ಕೋರಿ ಹೋರಾಟ ನಡೆಸುತ್ತಿರುವ ಕುಟುಂಬಸ್ಥರು ಹಾಗೂ ಹೋರಾಟಗಾರರು ಎಸ್ಐಟಿ ನೇತೃತ್ವ ವಹಿಸಿರುವ ಐಜಿಪಿ ಶಶಿಕುಮಾರ್ ಅವರ ನೇಮಕಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಶಶಿಕುಮಾರ್ ಅವರು ಈ ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಅವಧಿಯಲ್ಲಿ ಧರ್ಮಸ್ಥಳದ ಜೊತೆಗೆ ಹತ್ತಿರದ ಒಡನಾಟ ಹೊಂದಿದ್ದರು ಎಂಬ ಅಂಶವನ್ನು ಮುನ್ನೆಲೆಗೆ ತಂದಿದ್ದ ಹೋರಾಟಗಾರರು, ಈ ತನಿಖೆಯಿಂದ ಪೂರ್ಣ ಪ್ರಮಾಣದ ನ್ಯಾಯ ಸಿಗುವ ಬಗ್ಗೆ ಅಪಸ್ವರ ಎತ್ತಿದ್ದರು. ತನಿಖಾಧಿಕಾರಿಯ ಕಾರ್ಯವೈಖರಿ ಮೇಲೆಯೇ ಅನುಮಾನ ವ್ಯಕ್ತವಾಗಿದ್ದರಿಂದ, ಈ ವಿವಾದಗಳು ತನಿಖೆಯ ಪಾರದರ್ಶಕತೆ ಹಾಗೂ ನಂಬಿಕೆಗೆ ಧಕ್ಕೆ ತರಬಾರದು ಎಂಬ ಉದ್ದೇಶದಿಂದ ಶಶಿಕುಮಾರ್ ಅವರೇ ಸ್ವಯಂಪ್ರೇರಿತರಾಗಿ ತನಿಖಾ ಹೊಣೆಯಿಂದ ಕೈಬಿಡುವಂತೆ ಡಿಜಿಪಿಯವರಿಗೆ ವಿನಂತಿಸಿಕೊಂಡಿದ್ದಾರೆ.

ಹೊಸ ಮುಖ್ಯಸ್ಥರ ರೇಸ್ನಲ್ಲಿ ಮೂವರು ದಕ್ಷ ಅಧಿಕಾರಿಗಳು:
ಐಜಿಪಿ ಶಶಿಕುಮಾರ್ ಅವರ ಮನವಿ ಬೆನ್ನಲ್ಲೇ, ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಉನ್ನತ ಮಟ್ಟದಲ್ಲಿ ಎಸ್ಐಟಿಗೆ ಹೊಸ ಮುಖ್ಯಸ್ಥರನ್ನು ನೇಮಿಸುವ ಪ್ರಕ್ರಿಯೆ ಚುರುಕುಗೊಂಡಿದೆ. ಪ್ರಕರಣದ ತನಿಖೆಯನ್ನು ಅತ್ಯಂತ ನಿಷ್ಪಕ್ಷಪಾತವಾಗಿ ಹಾಗೂ ಚುರುಕಾಗಿ ಮುನ್ನಡೆಸಬಲ್ಲ ದಕ್ಷ ಅಧಿಕಾರಿಗೆ ಈ ಹೊಣೆ ವಹಿಸಲು ಸರ್ಕಾರ ಚಿಂತನೆ ನಡೆಸಿದೆ.

ಸದ್ಯ ಎಸ್ಐಟಿ ಸಾರಥ್ಯ ವಹಿಸಲು ಹಿರಿಯ ಐಪಿಎಸ್ ಅಧಿಕಾರಿಗಳಾದ ಲಾಭೂರಾಮ್, ಚೇತನ್ ಸಿಂಗ್ ರಾಥೋಡ್ ಹಾಗೂ ಡಾ. ಬೋರಲಿಂಗಯ್ಯ ಅವರ ಹೆಸರುಗಳು ಮುನ್ನೆಲೆಗೆ ಬಂದಿದ್ದು, ಈ ಪೈಕಿ ಒಬ್ಬರಿಗೆ ಜವಾಬ್ದಾರಿ ಹಸ್ತಾಂತರಿಸಿ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ.


