ಮಂಗಳೂರು: ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಒಳಗೊಂಡಿರುವ ‘ಬನ’ ತುಳು ಚಲನಚಿತ್ರ ಅಕ್ಟೋಬರ್ 23ರಿಂದ ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ತಿಳಿಸಿದ್ದಾರೆ.


ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮನೋಹರ್ ರೈ ವೈಪಾಲ ನಿರ್ಮಿಸಿರುವ ಈ ಚಿತ್ರ ಮಂಗಳೂರು, ಸುರತ್ಕಲ್, ಪಡುಬಿದ್ರಿ, ಉಡುಪಿ, ಮಣಿಪಾಲ, ಕಾರ್ಕಳ, ದೇರಳಕಟ್ಟೆ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ಸೇರಿದಂತೆ ಕರಾವಳಿಯ ವಿವಿಧ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
ಈಗಾಗಲೇ ನಡೆದ ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಚಿತ್ರತಂಡದ ನಿರೀಕ್ಷೆ ಹೆಚ್ಚಿಸಿದೆ. ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ವಿಭಿನ್ನವಾಗಿ ತೆರೆಮೇಲೆ ತರುವ ಪ್ರಯತ್ನವನ್ನು ಚಿತ್ರದಲ್ಲಿ ಮಾಡಲಾಗಿದೆ ಎಂದರು.


ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಪತ್ರಕರ್ತ ಹಾಗೂ ನಟ ಜಯಪ್ರಕಾಶ್ ಶೆಟ್ಟಿ ಮಾತನಾಡಿ, ತುಳು ಚಿತ್ರರಂಗದ ಬೆಳವಣಿಗೆಗೆ ಪ್ರೇಕ್ಷಕರು ಮತ್ತು ಮಾಧ್ಯಮಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು. ಚಿತ್ರದ ಚಿತ್ರೀಕರಣವನ್ನು ಪೂರ್ವಯೋಜನೆ ಹಾಗೂ ನಿರ್ದೇಶಕರ ಬದ್ಧತೆಯಿಂದ ಕೇವಲ 14 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ. ತುಳುನಾಡಿನ ಹುಲಿವೇಷ, ದೈವಾರಾಧನೆ ಸೇರಿದಂತೆ ಇಲ್ಲಿನ ವಿಶಿಷ್ಟ ಸಾಂಸ್ಕೃತಿಕ ಅಂಶಗಳನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ. ಪ್ರೀಮಿಯರ್ ಪ್ರದರ್ಶನದ ಬಳಿಕ ವ್ಯಕ್ತವಾದ ಉತ್ತಮ ಪ್ರತಿಕ್ರಿಯೆ ಚಿತ್ರದ ಬಗ್ಗೆ ವಿಶ್ವಾಸ ಮೂಡಿಸಿದೆ ಎಂದು ತಿಳಿಸಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ರೂಪ ವರ್ಕಾಡಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಹಾಲ್ ರೈ ನಾಯಕನಾಗಿ ಹಾಗೂ ಕೃತಿ ಶ್ರೀನಿವಾಸ್ ಪೂಜಾರಿ ನಾಯಕಿಯಾಗಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜಯಪ್ರಕಾಶ್ ಶೆಟ್ಟಿ ಅವರ ಖಡಕ್ ಸಂಭಾಷಣೆಗಳು ಚಿತ್ರದ ಪ್ರಮುಖ ಆಕರ್ಷಣೆಯಾಗಿವೆ.
ಇದಲ್ಲದೆ, ಶರತ್ ಆಳ್ವ, ರೂಪಾ.ಡಿ ಶೆಟ್ಟಿ, ಪ್ರೀಯ ಶೆಟ್ಟಿ, ವಿಜಯಹರಿ ರೈ, ವಿಕಾಸ್ ಪುತ್ರನ್, ನಿಜರೂಪ ಶೆಟ್ಟಿ, ಸವಿತಾ ಅಂಚನ್, ಭವ್ಯ ಪೂಜಾರಿ, ಧನ್ಯ ಪೂಜಾರಿ ಹಾಗೂ ಪ್ರವೀಣ್ ಕೊಡಕ್ಕಲ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಅರುಣ್ ರೈ ಪುತ್ತೂರು ಛಾಯಾಗ್ರಹಣ, ನವೀನ್ ನೇರಳ್ಕೊಡಿ ಸಂಕಲನ ಹಾಗೂ ಜಯಕಾರ್ತಿ ಸಂಗೀತ ಸಂಯೋಜನೆಯ ಜವಾಬ್ದಾರಿ ನಿರ್ವಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಮನೋಹರ್ ರೈ ವೈಪಾಲ, ಛಾಯಾಗ್ರಾಹಕ ಅರುಣ್ ರೈ ಪುತ್ತೂರು, ನಟಿ ಕೃತಿ ಶ್ರೀನಿವಾಸ್ ಪೂಜಾರಿ, ನಾಯಕ ನಟ ನಿಹಾಲ್ ರೈ, ಸವಿತಾ ಅಂಚನ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

