ಬೋಳಿಯಾರ್: ದ್ವಿಚಕ್ರ ವಾಹನಕ್ಕೆ ಪಿಕಪ್‌ ಢಿಕ್ಕಿ; ಇಬ್ಬರು ಯುವಕರು ಸಾವು..!

Prakhara News
1 Min Read

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರ್ ಸಮೀಪದ ಕುರ್ನಾಡು ಪೆಟ್ರೋಲ್ ಪಂಪ್ ಬಳಿ ಸೋಮವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಕಿನ್ಯ ಅರೆಬಿನಗರದ ಮಹಮ್ಮದ್ ಅರ್ಫಾಝ್ (22) ಹಾಗೂ ಕಿನ್ಯ ಉಕ್ಕುಡ ನಿವಾಸಿ ಜುನೈದ್ (23) ದುರ್ಮರಣಕ್ಕೀಡಾದ ಯುವಕರು.

ಸೋಮವಾರ ಸಂಜೆ ಬೋಳಿಯಾರ್ ಕಡೆಯಿಂದ ಮುಡಿಪು ಕಡೆಗೆ ದ್ವಿಚಕ್ರ ವಾಹನದಲ್ಲಿ ಇಬ್ಬರು ಯುವಕರು ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಕುರ್ನಾಡು ಪಡೀಲ್ ಪೆಟ್ರೋಲ್ ಪಂಪ್ ಬಳಿ ಹಿಂಬದಿಯಿಂದ ಅತಿವೇಗವಾಗಿ ಬಂದ ಪಿಕಪ್ ವಾಹನವು ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಇಬ್ಬರೂ ಯುವಕರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತರ ಪೈಕಿ ಜುನೈದ್ ಕಲ್ಲಾಪು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅರ್ಫಾಝ್ ಮುಂಬೈಯಲ್ಲಿ ಉದ್ಯೋಗದಲ್ಲಿದ್ದು ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.

ಅಪಘಾತ ಸಂಭವಿಸಿದ ತಕ್ಷಣವೇ ಎಚ್ಚೆತ್ತ ಪಿಕಪ್ ವಾಹನದ ಚಾಲಕ ವಾಹನದ ಬಾಗಿಲು ತೆಗೆದು ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಪೂರ್ಣ ದಘಟನೆಯ ದೃಶ್ಯಗಳು ಸಮೀಪದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು ತಕ್ಷಣವೇ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಪಿಕಪ್ ಚಾಲಕನಿಗಾಗಿ ತೀವ್ರ ಹುಡುಕಾಟ ಹಾಗೂ ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment