ಮಂಗಳೂರು: ಧಾರ್ಮಿಕ ಕೇಂದ್ರವಾದ ಚರ್ಚ್ ಗೆ ಪ್ರಾರ್ಥನೆಗೆ ಬರುತ್ತಿದ್ದ ಅಪ್ರಾಪ್ತ ಬಾಲಕರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಚರ್ಚ್ ಫಾದರ್ ಮೇಲೆ ಪೋಕ್ಸ ಪ್ರಕರಣ ದಾಖಲಾಗಿದೆ. ಮಂಗಳೂರಿನ ವೆಲೆನ್ಸಿಯಾದ ಸೆಂಟ್ ವಿನ್ಸೆಂಟ್ ಫೆರರ್ ಚರ್ಚ್ನ ಫಾದರ್ ಸಿಪ್ರಿಯನ್ ಪಿಂಟೋ ವಿರುದ್ಧ ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದಡಿ ಪ್ರಕರಣ ದಾಖಲಾಗಿದ್ದು, ಕರಾವಳಿ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿದೆ.


ಪ್ರಾರ್ಥನೆಗಾಗಿ ಚರ್ಚ್ಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕನಿಗೆ ಚಾಕೊಲೇಟ್ ನೀಡಿ ಪುಸಲಾಯಿಸುತ್ತಿದ್ದ ಫಾದರ್ ಸಿಪ್ರಿಯನ್ ಪಿಂಟೋ, ನಂತರ ಸಾಕ್ರಸ್ಟಿ ಬಳಿಯ ಕೊಠಡಿಗೆ ಕರೆಸಿಕೊಂಡು ಲೈಂಗಿಕ ದುರುದ್ದೇಶದಿಂದ ಅಸಭ್ಯವಾಗಿ ವರ್ತಿಸುತ್ತಿದ್ದರು. ಆಗಸ್ಟ್ 14ರಂದು ಸಂಜೆ 6:30ರ ಸುಮಾರಿಗೆ ಚರ್ಚ್ಗೆ ಬಂದ ಬಾಲಕನನ್ನು ರಿಸೆಪ್ಪನಿಸ್ಟ್ ಕೊಠಡಿಗೆ ಕರೆಯಿಸಿಕೊಂಡ ಆರೋಪಿ, ಗಂಭೀರ ಸ್ವರೂಪದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಾಲಕನು ಈ ಘಟನೆಯ ಕುರಿತು ತನ್ನ ಸ್ನೇಹಿತರೊಂದಿಗೆ ಚರ್ಚಿಸಿದಾಗ, ಚರ್ಚ್ಗೆ ಬರುತ್ತಿದ್ದ ಇತರ ಸ್ನೇಹಿತರಿಗೂ ಫಾದರ್ ಸಿಪ್ರಿಯನ್ ಪಿಂಟೋ ಇದೇ ರೀತಿ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಆ ಮೂಲಕ, ಪ್ರಾರ್ಥನೆಗೆ ಬರುತ್ತಿದ್ದ ಮುಗ್ಗ ಬಾಲಕರನ್ನೇ ಗುರಿಯಾಗಿಸಿಕೊಂಡು ಈ ಕೃತ್ಯ ಸಾಗುತ್ತಿತ್ತು ಎಂಬುದು ತಿಳಿದುಬಂದಿದೆ.
ಫಾದರ್ ನಡೆಸುತ್ತಿದ್ದ ನಿರಂತರ ದೌರ್ಜನ್ಯದಿಂದ ತೀವ್ರ ಭೀತಿಗೊಳಗಾದ ಸಂತ್ರಸ್ತ ಬಾಲಕನು ಕೊನೆಗೆ ಮನೆಯಲ್ಲಿ ಪೋಷಕರಿಗೆ ನಡೆದ ಘಟನೆಯನ್ನು ವಿವರಿಸಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಪೋಷಕರು ಕೂಡಲೇ ಧರ್ಮಪ್ರಾಂತ್ಯದ ಬಿಷಪ್ ಅವರನ್ನು ಭೇಟಿಯಾಗಿ ವಿಷಯವನ್ನು ಅವರ ಗಮನಕ್ಕೆ ತಂದಿದ್ದಾರೆ. ಬಿಷಪ್ ಅವರು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ ನಂತರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ. ಪೋಕ್ಸ್ (POCSO) ಕಾಯ್ದೆಯ ಅಡಿಯಲ್ಲಿ ಸಂತ್ರಸ್ತ ಬಾಲಕರ ಗುರುತು ಮತ್ತು ವಿಳಾಸವನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗಿದ್ದು, ಮುಚ್ಚಿದ ಲಕೋಟೆಯಲ್ಲಿ ವಿವರಗಳನ್ನು ಸಲ್ಲಿಸಲಾಗಿದೆ.


