ಭಯೋತ್ಪಾದಕರಿಗೆ ಹಣ ವರ್ಗಾವಣೆ ಆರೋಪ ಹೊರಿಸಿ ಪುತ್ತೂರಿನ ವ್ಯಕ್ತಿಗೆ ‘ಡಿಜಿಟಲ್ ಅರೆಸ್ಟ್’ ಬೆದರಿಕೆ; ₹1.31 ಕೋಟಿ ಲೂಟಿ..!

Prakhara News
2 Min Read

ಮಂಗಳೂರು: ತಮ್ಮನ್ನು ಮುಂಬೈ ಪೊಲೀಸ್ ಮತ್ತು ಭಯೋತ್ಪಾದನಾ ನಿಗ್ರಹ ದಳದ (ATS) ಅಧಿಕಾರಿಗಳು ಎಂದು ಪರಿಚಯಿಸಿಕೊಂಡ ಸೈಬರ್ ವಂಚಕರ ಜಾಲವೊಂದು, ಪುತ್ತೂರು ತಾಲೂಕಿನ ನಿವಾಸಿಯೊಬ್ಬರನ್ನು ‘ಡಿಜಿಟಲ್ ಅರೆಸ್ಟ್’ (Digital Arrest) ಮಾಡುವ ಬೆದರಿಕೆಯೊಡ್ಡಿ ಬರೋಬ್ಬರಿ 1.31 ಕೋಟಿ ರೂಪಾಯಿ ವಂಚಿಸಿರುವ ಭೀಕರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ದೂರಿನ ವಿವರಗಳ ಪ್ರಕಾರ, ಸೈಬರ್ ವಂಚಕರು ವಾಟ್ಸಾಪ್ (WhatsApp) ವಿಡಿಯೋ ಕರೆ ಮೂಲಕ ಪುತ್ತೂರಿನ ವ್ಯಕ್ತಿಯನ್ನು ಸಂಪರ್ಕಿಸಿದ್ದಾರೆ. ‘ಪಹಲ್ಗಾಮ್ ಹತ್ಯಾಕಾಂಡ’ದಲ್ಲಿ ಭಾಗಿಯಾದ ಉಗ್ರಗಾಮಿಗಳಿಗೆ ನಿಮ್ಮ ಖಾತೆಯಿಂದ ಹಣ ವರ್ಗಾವಣೆಯಾಗಿದೆ ಎಂದು ಗಂಭೀರ ಸುಳ್ಳು ಆರೋಪ ಹೊರಿಸಿದ್ದಾರೆ. ಅಲ್ಲದೆ, ತಕ್ಷಣವೇ ನಿಮ್ಮನ್ನು ಬಂಧಿಸಲಾಗುವುದು ಎಂದು ಭಯ ಹುಟ್ಟಿಸಿ, ನಿಮ್ಮ ಬ್ಯಾಂಕ್ ಖಾತೆಗಳು ತನಿಖೆಯಲ್ಲಿದ್ದು, ಖಾತೆಗಳ ಪರಿಶೀಲನೆ ಹಾಗೂ ಹಣದ ಮೂಲವನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ನಂಬಿಸಿದ್ದಾರೆ.

ಖಾತೆ ಪರಿಶೀಲನೆಯ ನೆಪದಲ್ಲಿ ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ (RTGS) ಮೂಲಕ ಹಣ ರವಾನಿಸುವಂತೆ ಸೂಚಿಸಿದ್ದಾರೆ. ವಂಚಕರ ಮಾತುಗಳನ್ನು ನಿಜವೆಂದು ನಂಬಿದ ಸಂತ್ರಸ್ತರು, ಕಳೆದ ಸೆಪ್ಟೆಂಬರ್ 2, 2026 ರಿಂದ ಅಕ್ಟೋಬರ್ 6, 2026 ರ ನಡುವಿನ ಅವಧಿಯಲ್ಲಿ ಆರೋಪಿಗಳು ನೀಡಿದ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಬರೋಬ್ಬರಿ ₹1,31,50,000/- (1.31 ಕೋಟಿ ರೂ.) ಹಣವನ್ನು ವರ್ಗಾಯಿಸಿದ್ದಾರೆ.

ನಂತರ ಸಂಶಯಗೊಂಡು ಪರಿಶೀಲಿಸಿದಾಗ ತಾವು ಭಾರಿ ಸೈಬರ್ ಮೋಸಕ್ಕೆ ಒಳಗಾಗಿರುವುದು ಅರಿವಿಗೆ ಬಂದಿದ್ದು, ತಕ್ಷಣವೇ ಸೈಬರ್ ಸಹಾಯವಾಣಿ ಸಂಖ್ಯೆ 1930 ಅನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಸೈಬರ್ ಅಪರಾಧ (CEN) ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ಸೆಕ್ಷನ್ 66(C), 66(D) ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಹಲವು ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಜಾಲದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಯಾವುದೇ ತನಿಖಾ ಸಂಸ್ಥೆ ಅಥವಾ ಪೊಲೀಸರು ವಿಡಿಯೋ ಕರೆ ಮೂಲಕ ‘ಡಿಜಿಟಲ್ ಅರೆಸ್ಟ್’ ಮಾಡುವುದಿಲ್ಲ ಹಾಗೂ ಹಣ ವರ್ಗಾವಣೆಗೆ ಸೂಚಿಸುವುದಿಲ್ಲ. ಇಂತಹ ಕರೆಗಳು ಬಂದಲ್ಲಿ ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

Share This Article
Leave a Comment