ಉಡುಪಿ:ಜೈಲ್ ವಾರ್ಡನ್‌ಗೆ ಕೊಲೆ ಬೆದರಿಕೆ ಪ್ರಕರಣ- ಆರೋಪಿ ಸಫಾನ್ ಹುಸೇನ್ ಗೆ 5 ವರ್ಷ ಕಠಿಣ ಜೈಲು ಶಿಕ್ಷೆ..!

Prakhara News
1 Min Read

ಉಡುಪಿ: ಸುಮಾರು 15 ವರ್ಷಗಳ ಹಿಂದೆ ಉಡುಪಿ ಜಿಲ್ಲಾ ಕಾರಾಗೃಹದ ವಾರ್ಡನ್‌‌ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ಬಂಧಿಯಾಗಿದ್ದ ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹40,000 ದಂಡ ವಿಧಿಸಿ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಸಫಾನ್ ಹುಸೈನ್ ಅಲಿಯಾಸ್ ರಜಾಕ್ ಶಿಕ್ಷೆಗೆ ಗುರಿಯಾದ ಆರೋಪಿ.

2011ರ ಡಿಸೆಂಬರ್ 3ರಂದು ಉಡುಪಿ ಜಿಲ್ಲಾ ಕಾರಾಗೃಹದ 1ನೇ ಬ್ಯಾರಕ್ ಎದುರಿನ ವರಾಂಡದಲ್ಲಿ ಜೈಲ್ ವಾರ್ಡನ್ ಅವರು ಪ್ರಭಾರ ವಹಿಸಿಕೊಳ್ಳಲು ಬಂಧಿಗಳ ಲೆಕ್ಕ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಎಲ್ಲಾ ಬಂಧಿಗಳಿಗೆ ತಮ್ಮ ಬ್ಯಾರಕ್‌ಗಳಿಗೆ ತೆರಳುವಂತೆ ಸೂಚಿಸಿದ್ದರು. ಆ ಸಂದರ್ಭದಲ್ಲಿ ಅಡುಗೆ ಕೋಣೆಯ ಎದುರು ನಿಂತಿದ್ದ ವಿಚಾರಣಾ ಬಂಧಿ ಸಫಾನ್ ಹುಸೈನ್, “ನಿನ್ನದು ಜಾಸ್ತಿಯಾಯಿತು, ನಿನ್ನನ್ನು ಕೊಲೆ ಮಾಡುತ್ತೇನೆ” ಎಂದು ವಾರ್ಡನ್‌ಗೆ ಜೀವ ಬೆದರಿಕೆ ಹಾಕಿದ್ದಲ್ಲದೆ, ಅವರ ಎಡ ಕೆನ್ನೆಗೆ ಬಾರಿಸಿ ಹಲ್ಲೆ ನಡೆಸಿದ್ದ.

ಈ ಘಟನೆಗೆ ಸಂಬಂಧಿಸಿದಂತೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿ, 2012ರ ಜನವರಿ 10ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ (ಚಾರ್ಜ್‌ಶೀಟ್) ಸಲ್ಲಿಸಿದ್ದರು. 2013ರ ಮೇ 29ರಂದು ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ, ನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ದೀರ್ಘಾವಧಿಯ ವಿಚಾರಣೆ ನಡೆಸಿದ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಯ ಮೇಲಿನ ಅಪರಾಧ ಸಾಬೀತಾಗಿದ್ದರಿಂದ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹40,000 ದಂಡ ವಿಧಿಸಿ ಆದೇಶಿಸಿದೆ.

Share This Article
Leave a Comment