ಮಂಗಳೂರು: ಮನೆಯಲ್ಲೇ ಕುಳಿತು ‘ವರ್ಕ್ ಫ್ರಮ್ ಹೋಮ್’ ಮೂಲಕ ದಿನಕ್ಕೆ ಸಾವಿರಾರು ರೂಪಾಯಿ ಗಳಿಸಬಹುದೆಂದು ನಂಬಿಸಿ, ಯುವತಿಯೊಬ್ಬರಿಗೆ ಬಲೆ ಬೀಸಿದ ಆನ್‌ಲೈನ್ ಸೈಬರ್ ಕಳ್ಳರು ಹಂತ ಹಂತವಾಗಿ ಬರೋಬ್ಬರಿ ₹9,33,866 ಹಣವನ್ನು ದೋಚಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ 25 ವರ್ಷದ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸೈಬರ್ ಅಪರಾಧ (CEN) ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ದೂರುದಾರೆ ಯುವತಿ ಸೆಪ್ಟೆಂಬರ್ 11ರಂದು ವಾಟ್ಸಪ್ ಬಳಸುತ್ತಿದ್ದಾಗ, ಅಪರಿಚಿತ ಮೊಬೈಲ್ ಸಂಖ್ಯೆಯಿಂದ (8135897645) ಮೆಸೇಜ್ ಬಂದಿದೆ. ತಾನು ‘ಮೇಘಾ’ ಕಂಪನಿಯ ಹೆಚ್‌ಆರ್ (HR) ಎಂದು ಪರಿಚಯಿಸಿಕೊಂಡ ವ್ಯಕ್ತಿ, ತಮ್ಮ ಸಂಸ್ಥೆಯಲ್ಲಿ ‘ವರ್ಕ್ ಫ್ರಮ್ ಹೋಮ್ ಡೇಟಾ ಎಂಟ್ರಿ’ ಕೆಲಸವಿದೆ ಎಂದು ನಂಬಿಸಿದ್ದಾನೆ. ಬಳಿಕ ಟೆಲಿಗ್ರಾಂ ಲಿಂಕ್ ಕಳುಹಿಸಿ ಅದರಲ್ಲಿ ಜಾಯಿನ್ ಆಗುವಂತೆ ಸೂಚಿಸಿದ್ದಾನೆ.
ಟೆಲಿಗ್ರಾಂ ಲಿಂಕ್ ಮೂಲಕ ಜಾಯಿನ್ ಆದ ಯುವತಿಗೆ ದಿನಕ್ಕೆ 20 ಟಾಸ್ಕ್ ಪೂರ್ಣಗೊಳಿಸಿದರೆ ₹200 ನೀಡಲಾಗುವುದು ಎಂದು ತಿಳಿಸಲಾಗಿತ್ತು. ಮೊದಲ ದಿನ ನೀಡಿದ ಟಾಸ್ಕ್ ಪೂರ್ಣಗೊಳಿಸಿದ್ದಕ್ಕೆ ಯುವತಿಯ ಖಾತೆಗೆ ₹200 ಜಮೆಯಾಗಿತ್ತು.

ಮರುದಿನ 13 ಟಾಸ್ಕ್‌ಗಳನ್ನು ಪೂರ್ಣಗೊಳಿಸಲು ಯುವತಿಗೆ ಸಾಧ್ಯವಾಗಲಿಲ್ಲ. ಈ ವೇಳೆ ‘ಅಮರ್ಜೀತ್ ಕುಮಾರ್’ (@tutorcode321) ಎಂಬ ಮತ್ತೊಂದು ಟೆಲಿಗ್ರಾಂ ಐಡಿಯಿಂದ ಸಂಪರ್ಕಿಸಿದ ಸೈಬರ್ ಚೋರರು, ಟಾಸ್ಕ್ ಮುಂದುವರಿಸಲು ಜಿಪೇ (Google Pay) ಮೂಲಕ ₹3,000 ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ಹಣ ಪಾವತಿಸಿದರೂ ಟಾಸ್ಕ್ ಪೂರ್ಣಗೊಳ್ಳದ ಕಾರಣ, ಹೂಡಿಕೆ ಮಾಡಿದ ಹಣವನ್ನು ವಾಪಸ್ ನೀಡುವಂತೆ ಯುವತಿ ವಿನಂತಿಸಿದ್ದಾರೆ.
ಆಗ ಸಿಲುಕಿಕೊಂಡ ಹಣವನ್ನು ವಾಪಸ್ ಪಡೆಯಬೇಕಾದರೆ ಹೆಚ್ಚುವರಿ ಮೊತ್ತ ಪಾವತಿಸಬೇಕೆಂದು ವಂಚಕರು ಹಂತ ಹಂತವಾಗಿ ಹೊಸ ಹೊಸ ಬ್ಯಾಂಕ್ ಖಾತೆಗಳನ್ನು ನೀಡಿದ್ದಾರೆ. ಇದನ್ನು ನಿಜವೆಂದು ನಂಬಿದ ಯುವತಿ, ಸೆಪ್ಟೆಂಬರ್ 12 ರಿಂದ ಸೆಪ್ಟೆಂಬರ್ 17 ರ ಅವಧಿಯಲ್ಲಿ ಅಪರಿಚಿತರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹9,33,866 ಹಣವನ್ನು ವರ್ಗಾವಣೆ ಮಾಡಿದ್ದಾರೆ. ಕೊನೆಗೆ ಎಷ್ಟು ಹಣ ಹಾಕಿದರೂ ವಾಪಸ್ ಬಾರದೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದ ತಕ್ಷಣ ಯುವತಿ ಪೊಲೀಸರ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

