ಸೌದಿ ರಾಜಧಾನಿ ರಿಯಾದ್ ಮೇಲೆ ಹೌತಿ ಬಂಡುಕೋರರ ಕ್ಷಿಪಣಿ ದಾಳಿ: ವಿಮಾನ ನಿಲ್ದಾಣದ ಬಳಿ ಸರಣಿ ಸ್ಫೋಟ..!

Prakhara News
2 Min Read

ದುಬೈ: ಸೌದಿ ಅರೇಬಿಯಾ ಮತ್ತು ಯೆಮೆನ್‌ನ ಹೌತಿ ಬಂಡುಕೋರರ ನಡುವಿನ ಸಂಘರ್ಷ ಭೀಕರ ಸ್ವರೂಪ ಪಡೆದುಕೊಂಡಿದ್ದು, ಸೌದಿ ರಾಜಧಾನಿ ರಿಯಾದ್ ಮೇಲೆ ಹೌತಿಗಳು ಕ್ಷಿಪಣಿ ದಾಳಿ ನಡೆಸಿದ್ದಾರೆ. ರಿಯಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಸರಣಿ ಸ್ಫೋಟಗಳು ಸಂಭವಿಸಿದ್ದು, ಕಪ್ಪು ಹೊಗೆಯ ಮೋಡಗಳು ಆವರಿಸಿವೆ ಎಂದು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ರಿಯಾದ್ ನಗರದ ಮೇಲೆ ನಡೆದ ಮೊದಲ ಪ್ರಮುಖ ನೇರ ದಾಳಿ ಇದಾಗಿದ್ದು, ಸೌದಿ ಅರೇಬಿಯಾ ಸರ್ಕಾರ ಈ ಕುರಿತು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಸ್ಥಳೀಯ ಕಾಲಮಾನ ಬೆಳಗಿನ ಜಾವ 3 ಗಂಟೆಗೆ ರಿಯಾದ್ ಮತ್ತು ಅಲ್ ಖಾರ್ಜ್ ಪ್ರದೇಶಗಳಲ್ಲಿ ಸಾರ್ವಜನಿಕರ ಫೋನ್‌ಗಳಿಗೆ ಕ್ಷಿಪಣಿ ದಾಳಿಯ ಎಚ್ಚರಿಕೆ (Air Raid Alert) ಸಂದೇಶಗಳು ಬಂದಿದ್ದವು. ವೈಮಾನಿಕ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತೆರೆದ ಪ್ರದೇಶಗಳಿಗೆ ಬರಬಾರದು ಎಂದು ಅಲರ್ಟ್ ನೀಡಲಾಗಿತ್ತು. ಇದರ ಬೆನ್ನಲ್ಲೇ ಭಾರಿ ಪ್ರಮಾಣದ ಸ್ಫೋಟದ ಶಬ್ದಗಳು ಕೇಳಿಬಂದಿದ್ದು, ರಿಯಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಹೊಗೆ ಆವರಿಸಿದೆ.

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಹಾಗೂ ಹೌತಿ ಬಂಡುಕೋರರ ನಡುವೆ ದಕ್ಷಿಣ ಯೆಮೆನ್‌ನಲ್ಲಿ ತೀವ್ರ ಕಾಳಗ ನಡೆಯುತ್ತಿದ್ದು, ಘಟನೆಯಲ್ಲಿ 17 ಯೆಮೆನ್ ಸೈನಿಕರು ಹಾಗೂ 31 ಹೌತಿ ಉಗ್ರರು ಸೇರಿ ಒಟ್ಟು 48 ಜನರು ಸಾವನ್ನಪ್ಪಿದ್ದಾರೆ. ಯೆಮೆನ್ ರಾಜಧಾನಿ ಸನಾ ಮೇಲೆ ಸೌದಿ ಪಡೆಗಳು ನಡೆಸಲು ಉದ್ದೇಶಿಸಿದ್ದ ವೈಮಾನಿಕ ದಾಳಿಯನ್ನು ವಿಫಲಗೊಳಿಸಿದ ಬೆನ್ನಲ್ಲೇ, ಹೌತಿಗಳು ರಿಯಾದ್ ಮೇಲೆ ಈ ಪ್ರತೀಕಾರದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಸೌದಿ ಅರೇಬಿಯಾದ ನಾಗರಿಕ ಪ್ರದೇಶಗಳು ಹಾಗೂ ವಿಮಾನ ನಿಲ್ದಾಣದ ಮೇಲಿನ ಹೌತಿ ಪಡೆಗಳ ದಾಳಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ತೀವ್ರವಾಗಿ ಖಂಡಿಸಿದೆ.

ಸೌದಿ ಅರೇಬಿಯಾಕ್ಕೆ ತನ್ನ ಸಂಪೂರ್ಣ ಬೆಂಬಲ ಪ್ರಕಟಿಸಿರುವ ಭದ್ರತಾ ಮಂಡಳಿಯು, ಅಂತರರಾಷ್ಟ್ರೀಯ ಕಾನೂನುಗಳ ಪ್ರಕಾರ ತನ್ನ ರಕ್ಷಣೆಗೆ ಸೂಕ್ತ ಪ್ರತಿಕ್ರಿಯೆ ನೀಡುವ ಹಕ್ಕು ಸೌದಿಗೆ ಇದೆ ಎಂದಿದೆ. ಇದೇ ವೇಳೆ ಕೆಂಪು ಸಮುದ್ರದಲ್ಲಿ ಸೌದಿ ಹಡಗುಗಳ ಮೇಲಿನ ದಿಗ್ಬಂಧನವನ್ನು ತಿರಸ್ಕರಿಸಿರುವ ಮಂಡಳಿಯು, ಯೆಮೆನ್ ಸರ್ಕಾರಕ್ಕೂ ತನ್ನ ಬೆಂಬಲವನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದೆ.

Share This Article
Leave a Comment