ಪುತ್ತೂರು: ಕರಾವಳಿಗರ ಬಹುನಿರೀಕ್ಷಿತ ಮಂಗಳೂರು-ಬೆಂಗಳೂರು (ಯಶವಂತಪುರ) ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ 2ನೇ ಹಂತದ ಪೂರ್ಣ ಪ್ರಮಾಣದ ಪ್ರಾಯೋಗಿಕ ಸಂಚಾರ ಗುರುವಾರ (ಸೆ.10) ಯಶಸ್ವಿಯಾಗಿ ನಡೆದಿದೆ. ಶಿರಾಡಿಘಾಟ್ ಹತ್ತಿ ಯಶಸ್ವಿಯಾಗಿ ಸಂಚರಿಸಿರುವ ಈ ರೈಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕೇಂದ್ರವಾದ ಪುತ್ತೂರು (ಕಬಕ ಪುತ್ತೂರು) ನಿಲ್ದಾಣದಲ್ಲಿ ಕಡ್ಡಾಯ ನಿಲುಗಡೆ ನೀಡಬೇಕೆಂಬ ಬೇಡಿಕೆ ತೀವ್ರಗೊಂಡಿದೆ.


ಅತ್ಯಂತ ಸವಾಲಿನದ್ದಾಗಿದ್ದ 55 ಕಿಲೋಮೀಟರ್‌ಗಳ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ವಿಭಾಗದಲ್ಲಿ ರೈಲನ್ನು 30 ರಿಂದ 40 ಕಿ.ಮೀ ವೇಗದಲ್ಲಿ ಸುರಕ್ಷಿತವಾಗಿ ಓಡಿಸಬಹುದು ಎಂದು ಖಚಿತಪಡಿಸಿಕೊಂಡ ಬಳಿಕ ರೈಲ್ವೆ ಇಲಾಖೆಯು ಸೆಪ್ಟೆಂಬರ್ 5 ಮತ್ತು ಸೆಪ್ಟೆಂಬರ್ 10 ರಂದು ಪ್ರಾಯೋಗಿಕ ಸಂಚಾರ ನಡೆಸಿದೆ.
ಬೆಂಗಳೂರಿನಿಂದ ಮಂಗಳೂರು ಜಂಕ್ಷನ್‌ಗೆ ಬಂದ ವಂದೇ ಭಾರತ್ ರೈಲನ್ನು ಕಣ್ಣುಂಬಿಕೊಳ್ಳಲು ಹಾಗೂ ಸ್ವಾಗತಿಸಲು ಪುತ್ತೂರು ಮತ್ತು ಸುತ್ತಮುತ್ತಲಿನ ನೂರಾರು ಜನರು ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದರು. 2ನೇ ಹಂತದ ಪ್ರಾಯೋಗಿಕ ಓಡಾಟದಲ್ಲಾದರೂ ರೈಲು ನಿಲ್ಲಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಕೊಂಚ ನಿರಾಶೆಯಾಯಿತು. ವಂದೇ ಭಾರತ್ ರೈಲು ಪುತ್ತೂರು ನಿಲ್ದಾಣದಲ್ಲಿ ತನ್ನ ವೇಗವನ್ನು ಕೊಂಚ ತಗ್ಗಿಸಿ, ನಿಲ್ಲದೆ ನೇರವಾಗಿ ಮಂಗಳೂರಿನತ್ತ ಪ್ರಯಾಣ ಬೆಳೆಸಿದೆ.

ಪುತ್ತೂರು ತಾಲೂಕು ಸೇರಿದಂತೆ ಕಡಬ, ಸುಳ್ಯ ಹಾಗೂ ವಿಟ್ಲ ಭಾಗದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಂದೇ ಭಾರತ್ ರೈಲಿಗೆ ಕಬಕ ಪುತ್ತೂರು ನಿಲ್ದಾಣದಲ್ಲಿ ಅಧಿಕೃತ ಸ್ಟಾಪ್ ನೀಡಬೇಕು ಎಂದು ಸ್ಥಳೀಯರು ಈಗಾಗಲೇ ರೈಲ್ವೆ ಇಲಾಖೆ ಹಾಗೂ ಸಂಸದರಿಗೆ ಮನವಿ ಸಲ್ಲಿಸಿದ್ದಾರೆ.
ಮಂಗಳೂರು ಮತ್ತು ಸಕಲೇಶಪುರ ನಡುವೆ ಒಂದೇ ರೈಲು ಹಳಿ (Single Line) ಇರುವ ಕಾರಣಕ್ಕಾಗಿ ಹಾಗೂ ಘಾಟ್ ವಿಭಾಗದಲ್ಲಿ ಸುರಕ್ಷತೆಯ ದೃಷ್ಟಿಯಿಂದ ನಿಧಾನವಾಗಿ ಚಲಿಸಬೇಕಿರುವುದರಿಂದ, ವಂದೇ ಭಾರತ್ ರೈಲು ನಿರೀಕ್ಷಿತ ಮಟ್ಟದಲ್ಲಿ ಸಮಯ ಪಾಲನೆ ಮಾಡುವುದು ರೈಲ್ವೆ ಇಲಾಖೆಗೆ ದೊಡ್ಡ ಸವಾಲಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದಾಗ್ಯೂ, ವಾಣಿಜ್ಯ ಸಂಚಾರ ಆರಂಭವಾಗುವ ವೇಳೆಗೆ ಪುತ್ತೂರಿನಲ್ಲಿ ನಿಲುಗಡೆ ಸಿಗಲಿದೆ ಎಂಬ ಭರವಸೆಯಲ್ಲಿ ಕರಾವಳಿ ಜನರಿದ್ದಾರೆ.

