ಮಂಗಳೂರು: ಪದ್ಮಶ್ರೀ ಪುರಸ್ಕೃತ, ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೂ ಚುನಾವಣಾ ಆಯೋಗವು ‘ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ’ (SIR) ನೋಟಿಸ್ ಜಾರಿಗೊಳಿಸಿದ್ದು, ತಪ್ಪು ಅರಿವಾದ ಬಳಿಕ ಅಧಿಕಾರಿಗಳು ಅವರ ಬಳಿ ಕ್ಷಮೆಯಾಚಿಸಿರುವ ಪ್ರಸಂಗ ಮಂಗಳೂರು ತಾಲೂಕಿನಲ್ಲಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ಹಾಜಬ್ಬ ಅವರ ಮನೆಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸ್ವತಃ ಪಡೆದುಕೊಂಡು ಹೋಗಿದ್ದಾರೆ.


ಉಳ್ಳಾಲ ತಾಲೂಕಿನ ಹರೇಕಳದ ನಿವಾಸಿಯಾಗಿರುವ ಹಾಜಬ್ಬ ಅವರಿಗೆ ಎಸ್ಐಆರ್ ಪರಿಶೀಲನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅಧಿಕಾರಿಗಳು ನೋಟಿಸ್ ನೀಡಿದ್ದರು. 2002ರ ಹಳೆಯ ಮತದಾರರ ಪಟ್ಟಿಯಲ್ಲಿ ಹರೇಕಳ ಹಾಜಬ್ಬ ಅವರ ಹೆಸರು ಕೇವಲ ‘ಹಾಜಬ್ಬ’ ಎಂದು ದಾಖಲಾಗಿತ್ತು. ಆದರೆ, ಇತ್ತೀಚಿನ ಅವರ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ‘ಹರೇಕಳ ಹಾಜಬ್ಬ’ ಎಂದು ನಮೂದಾಗಿರುವುದರಿಂದ ಸಾಫ್ಟ್ವೇರ್ ಪರಿಶೀಲನೆ ವೇಳೆ ಹೆಸರು ಹೊಂದಾಣಿಕೆಯಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಸಾಫ್ಟ್ವೇರ್ ಆಧಾರಿತ ಪರಿಶೀಲನೆಯ ಭಾಗವಾಗಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಸೆಪ್ಟೆಂಬರ್ 11ರಂದು ಮೂಲ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ಹಾಜರಾಗುವಂತೆಯೂ ಸೂಚಿಸಲಾಗಿತ್ತು.
ಪದ್ಮಶ್ರೀ ಪುರಸ್ಕೃತ ಸಮಾಜಸೇವಕರಿಗೇ ನೋಟಿಸ್ ತಲುಪಿರುವುದು ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ, ತಮ್ಮ ಪ್ರಮಾದದ ಅರಿವಾಗಿ ತಕ್ಷಣವೇ ಹಾಜಬ್ಬ ಅವರ ಮನೆಗೆ ಧಾವಿಸಿದ್ದಾರೆ. ಅಲ್ಲಿಯೇ ಅವರಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಂಡ ಅಧಿಕಾರಿಗಳು, ಆದ ಪ್ರಮಾದಕ್ಕೆ ಹಾಜಬ್ಬ ಅವರ ಬಳಿ ವಿನಮ್ರವಾಗಿ ಕ್ಷಮೆಯಾಚಿಸಿದ್ದಾರೆ. ಬೀದಿ ಬದಿಯಲ್ಲಿ ಕಿತ್ತಳೆ ಹಣ್ಣು ಮಾರಿ ಬಂದ ಹಣದಲ್ಲೇ ತಮ್ಮ ಹಳ್ಳಿಗೆ ಶಾಲೆ ಕಟ್ಟಿಸಿ ಜಾಗತಿಕ ಮಟ್ಟದಲ್ಲಿ ಮನೆಮಾತಾಗಿರುವ ಹರೇಕಳ ಹಾಜಬ್ಬ ಅವರ ಅಪಾರ ಸಮಾಜಸೇವೆಗೆ ಕೇಂದ್ರ ಸರ್ಕಾರ ‘ಪದ್ಮಶ್ರೀ’ ಪುರಸ್ಕಾರ ನೀಡಿ ಗೌರವಿಸಿದೆ.



