ತ್ರಿಶೂರ್: ಓಣಂ ಹಬ್ಬ ಮತ್ತು ಕುಟುಂಬದ ಮದುವೆ ಕಾರ್ಯಕ್ರಮಕ್ಕಾಗಿ ಗಲ್ಫ್ನಿಂದ ಮನೆಗೆ ಬಂದಿದ್ದ ವ್ಯಕ್ತಿ, ಅವರ ಪತ್ನಿ ಹಾಗೂ 3 ವರ್ಷದ ಮಗ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಕೇರಳದ ಕುನ್ನಂಕುಲಂನಲ್ಲಿ ನಡೆದಿದೆ.


ತ್ರಿಶೂರ್ ನಿವಾಸಿ ಮುನೀರ್ (39), ಅವರ ಪತ್ನಿ ಶಫ್ನಾ ಹಾಗೂ ಮಗ ಮುಹಮ್ಮದ್ ಅಮೀನ್ ಇಬಾಕ್ ಮೃತಪಟ್ಟ ದುರ್ದೈವಿಗಳು. ಇನ್ನು ಕೆಲವೇ ದಿನಗಳಲ್ಲಿ ಮುನೀರ್ ಮರಳಿ ಗಲ್ಫ್ಗೆ ತೆರಳಬೇಕಿತ್ತು.
ಸಂಬಂಧಿಕರ ಮದುವೆ ಕಾರ್ಯಕ್ರಮ ಮುಗಿಸಿ ಮುನೀರ್ ತಮ್ಮ ಪತ್ನಿ ಮತ್ತು ಮಗನೊಂದಿಗೆ ಮೋಟಾರ್ ಸೈಕಲ್ನಲ್ಲಿ ಮನೆಗೆ ಮರಳುತ್ತಿದ್ದರು. ಕುನ್ನಂಕುಲಂ-ಗುರುವಾಯೂರ್ ರಸ್ತೆಯ ಎಕ್ಸೆಲ್ ಪಬ್ಲಿಕ್ ಶಾಲೆಯ ಬಳಿ ಫೋನ್ ಕರೆ ಬಂದಿದ್ದರಿಂದ ಮುನೀರ್ ಬೈಕನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಅತಿಯಾದ ವೇಗವಾಗಿ ಬಂದ ಕಾರೊಂದು ಬೈಕ್ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ಭೀಕರತೆಗೆ ಮೂವರೂ ಬೈಕ್ನಿಂದ ಬಲವಾಗಿ ಎಸೆಯಲ್ಪಟ್ಟಿದ್ದಾರೆ. ರಕ್ಷಣೆಗೆ ಧಾವಿಸಿದ ಸ್ಥಳೀಯರ ಪ್ರಕಾರ, ಶಫ್ನಾ ಅವರ ಮೃತದೇಹ ರಸ್ತೆ ಬದಿಯ ಗೋಡೆಯ ಇನ್ನೊಂದು ಬದಿಯಲ್ಲಿ, ಮಗುವಿನ ದೇಹ ವಿದ್ಯುತ್ ಕಂಬದ ಬಳಿ ಹಾಗೂ ಮುನೀರ್ ರಸ್ತೆಯ ಬದಿಯಲ್ಲಿ ಪತ್ತೆಯಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೂವರೂ ಕೊನೆಯುಸಿರೆಳೆದಿದ್ದಾರೆ.

ಕಾರು ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಅಪಘಾತವೆಸಗಿದ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ. ಕಾರಿನಲ್ಲಿದ್ದ ಉಳಿದ ಮೂವರು ಪ್ರಯಾಣಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ಸಂತಸದಿಂದಿದ್ದ ಕುಟುಂಬದಲ್ಲಿ ಈಗ ಕತ್ತಲೆ ಆವರಿಸಿದ್ದು, ಮೃತರ ಅಂತಿಮ ಸಂಸ್ಕಾರ ಸ್ವಗ್ರಾಮದಲ್ಲಿ ನೆರವೇರಲಿದೆ.

