ಚಾಲಕನ ನಿಯಂತ್ರಣ ತಪ್ಪಿ ಪಣಂಬೂರು ಬಳಿ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ ಪಲ್ಟಿ; ಪ್ರಯಾಣಿಕರು ಪಾರು

Prakhara News
1 Min Read

ಸುರತ್ಕಲ್: ಕಾರ್ಕಳದಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಣಂಬೂರಿನ ಎಂಸಿಎಫ್‌ (MCF) ಸಂಸ್ಥೆಯ ಸಮೀಪ ಪಲ್ಟಿಯಾದ ಘಟನೆ ಶುಕ್ರವಾರ ಸಂಭವಿಸಿದೆ.

ಅಪಘಾತದಲ್ಲಿ ಓರ್ವ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಉಳಿದ ಪ್ರಯಾಣಿಕರೆಲ್ಲರೂ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಕಾರ್ಕಳದಿಂದ ಹೊರಟಿದ್ದ ಬಸ್ಸು ಪಣಂಬೂರು ಬಳಿಯ ಎಂಸಿಎಫ್‌ ಸಮೀಪ ತಲುಪುತ್ತಿದ್ದಂತೆ, ಚಾಲಕನ ನಿಯಂತ್ರಣ ತಪ್ಪಿ ಬಸ್ಸಿನ ಚಕ್ರ ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಇದರಿಂದಾಗಿ ನಿಯಂತ್ರಣ ಕಳೆದುಕೊಂಡ ಬಸ್ಸು ರಸ್ತೆಯ ಸರ್ವಿಸ್‌ ಭಾಗಕ್ಕೆ ಮಗುಚಿ ಬಿದ್ದಿದೆ.

ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಲಹೊತ್ತು ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment