ಮುಲ್ಕಿ: ಕಿಲ್ಪಾಡಿ ಗ್ರಾಮದ ಕೊರ್ದಬ್ಬು ದೈವಸ್ಥಾನದಲ್ಲಿ ಬೀಗ ಮುರಿದು ಒಳನುಗ್ಗಿದ ಕಳ್ಳರು ದೈವದ ಬೆಳ್ಳಿ ಮುಖವಾಡ, ಖಡ್ಗ ಹಾಗೂ ಸೊಂಟಪಟ್ಟಿ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಸೆಪ್ಟೆಂಬರ್ 1 ಮತ್ತು 2ರ ಮಧ್ಯರಾತ್ರಿ ನಡೆದಿದೆ.


ದೈವಸ್ಥಾನದ ಅರ್ಚಕರಾದ ಕಿಶೋರ್ ಅವರು ಸೆಪ್ಟೆಂಬರ್ 1ರಂದು ಸಂಜೆ 6 ಗಂಟೆಗೆ ಪೂಜೆ ನೆರವೇರಿಸಿ, ದೈವದ ಆಭರಣಗಳನ್ನು ಪರಿಶೀಲಿಸಿ ಸಂಜೆ 7 ಗಂಟೆಗೆ ಬಾಗಿಲಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಸೆಪ್ಟೆಂಬರ್ 2ರಂದು ಬೆಳಿಗ್ಗೆ 7 ಗಂಟೆಗೆ ಪೂಜೆಗೆಂದು ಬಂದಾಗ ದೈವಸ್ಥಾನದ ಮುಖ್ಯ ದ್ವಾರದ ಬೀಗವನ್ನು ತುಂಡರಿಸಿ ಕೆಳಗೆ ಎಸೆಯಲಾಗಿರುವುದು ಬೆಳಕಿಗೆ ಬಂದಿದೆ. ಗರ್ಭಗುಡಿಗೆ ತೆರಳಿ ಪರಿಶೀಲಿಸಿದಾಗ ಕೊರ್ದಬ್ಬು ದೈವದ ಮೂರ್ತಿಗೆ ಅಲಂಕರಿಸಲಾಗಿದ್ದ ಆಭರಣಗಳು ಕಳವಾಗಿರುವುದು ತಿಳಿದು ಬಂದಿದೆ.
ಬೆಳ್ಳಿಯ ಮೊಗ (ಮುಖವಾಡ): ಸುಮಾರು 6 ಕೆಜಿ ತೂಕದ ಬೆಳ್ಳಿ ಮುಖವಾಡ. ಇದರಲ್ಲಿ ಬಂಗಾರದ ತಗಡಿನ ನಾಲಿಗೆ ಮತ್ತು ಮೀಸೆ, ಹಣೆಯಲ್ಲಿ ಸೂರ್ಯ-ಚಂದ್ರ ಆಕೃತಿಯ ಬಂಗಾರದ ಪದಕ, ಕೆಂಪು ಮತ್ತು ನೀಲಿ ಕಲ್ಲುಗಳನ್ನು ಹೊಂದಿದ ಬಂಗಾರದ ದೃಷ್ಟಿ ಹಾಗೂ ಪ್ರಭಾವಳಿ ಮಾದರಿಯ ಕಿರೀಟ ಒಳಗೊಂಡಿದೆ.

ಬೆಳ್ಳಿಯ ಖಡ್ಗ (ಖಡ್ಸಲೆ): ತುದಿಯಲ್ಲಿ ಬಂಗಾರದ ಕವಚ ಹೊಂದಿರುವ ಸುಮಾರು 1 ಕೆಜಿ ತೂಕದ ಬೆಳ್ಳಿಯ ಖಡ್ಗ.
ಬೆಳ್ಳಿಯ ಸೊಂಟಪಟ್ಟಿ: ಒಟ್ಟು 4 ಕೆಜಿ ತೂಕದ 2 ಬೆಳ್ಳಿಯ ಸೊಂಟಪಟ್ಟಿಗಳು.
ಒಟ್ಟಾರೆಯಾಗಿ ಸುಮಾರು 11 ಕೆಜಿ ಬೆಳ್ಳಿ ಹಾಗೂ 5 ಪವನ್ ಬಂಗಾರ ಒಳಗೊಂಡಿದ್ದು, ಕಳುವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ₹14,95,000 ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಅರ್ಚಕ ಕಿಶೋರ್ ಅವರು ನೀಡಿದ ದೂರಿನ ಆಧಾರದ ಮೇಲೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

