ಹಿರಿಯ ನಾಗರಿಕರ ಸಂಘ ಸ್ಥಾಪಿಸಲು ಚಿಂತನೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾಹಿತಿ

Prakhara News
2 Min Read

ಮಂಗಳೂರು : ಯುವಜನರನ್ನು ಬೆಸೆಯಲು ರಾಜ್ಯ ಸರ್ಕಾರ ರೂಪಿಸಿರುವ ಭಾರತ್ ಜೋಡೋ ಯುವ ಸಂಘದ ಮಾದರಿಯಲ್ಲಿ ಪ್ರತೀ ಊರಿನಲ್ಲಿ ಹಿರಿಯ ನಾಗರಿಕರನ್ನು ಒಗ್ಗೂಡಿಸಲು ಸೀನಿಯರ್ ಸಿಟಿಜನ್ ಸಂಘಟನೆ ಸ್ಥಾಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ. ಮಂಗಳೂರು ನಗರದಲ್ಲೇ ಪ್ರಾಯೋಗಿಕವಾಗಿ ಈ ಯೋಜನೆ ಜಾರಿ ಮಾಡಲು ಪ್ರಯತ್ನಿಸಲಾಗುವುದೆಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ, ರೋಟರಿ ಇಂಟರ್‌ನ್ಯಾಶನಲ್ ಜಿಲ್ಲೆ 3182, ದ.ಕ.ಜಿಲ್ಲಾ ಮಾಜಿ ಸೈನಿಕರ ಸಂಘ, ಮಂಥನ ಓಜಸ್ ಟ್ರಸ್ಟ್ ಮತ್ತು ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಭಾನುವಾರ ರೆಡ್‌ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ನಡೆದ “ಧನ್ಯತಾ” ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ನಮ್ಮ ಹಿರಿಯರ ತ್ಯಾಗ, ತಾಳ್ಮೆ, ಬದ್ಧತೆಯಿಂದಾಗಿ ಇಂದು ಉತ್ತಮ ಸಮಾಜ ನಿರ್ಮಾಣವಾಗಿದೆ. ಇದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಹಿರಿಯರ ಅನುಭವ ಹಾಗೂ ಆದರ್ಶಗಳಿಂದ ಯುವ ಜನಾಂಗ ಪ್ರೇರಣೆ ಪಡೆಯಬೇಕು ಎಂದು ಸಚಿವರು ಹೇಳಿದರು.

ರೋಟರಿ ಜಿಲ್ಲೆ 3181 ಗವರ್ನರ್ ಸತೀಶ್ ಬೋಳಾರ್ ಕಾರ್ಯಕ್ರಮ ಉದ್ಘಾಟಿಸಿದರು. ದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಕರ್ನಲ್ ಎ.ಕೆ.ಜಯಚಂದ್ರನ್, ಮಂಥನ ಓಜಸ್ ಟ್ರಸ್ಟ್ ನ ಅಧ್ಯಕ್ಷೆ ಮಂಗಳಾ ನಂದಕುಮಾರ್,ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ರೋಟರಿ ಸಂಧ್ಯಾ ಸುರಕ್ಷಾ ಯೋಜನೆಯ ಚೇರ್ಮನ್ ಅನಿಲ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಾಧಕರಿಗೆ ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಜ್ರ ರಾವ್, ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ರಾಧಾಕೃಷ್ಣ, ಟಿ.ಜಿ.ಶೆಣೈ, ರಾಬರ್ಟ್ ಫ್ರಾಂಕ್ಲಿನ್ ರೇಗೊ, ಕಟ್ಟ ಭಾಸ್ಕರ ರೈ, ಸುಮಂಗಲಾ ಪ್ರಭಾಕರ್, ಪಕ್ರುದ್ದೀನ್ ಕುಣಿಲ್, ಅರುವ ಕೊರಗಪ್ಪ ಶೆಟ್ಟಿ, ಉಷಾ ವಿಶ್ವನಾಥ್, ಸತೀಶ್ ರಾವ್ ಇಡ್ಯಾ ಇವರುಗಳನ್ನು ಸನ್ಮಾನಿಸಲಾಯಿತು. ಡಾ.ಶಿಲ್ಪಾ ದಿನೇಶ್ ಸಾಧಕರ ವಿವರ ನೀಡಿದರು. ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಧೀರಜ್.ಬಿ.ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

ಮಾಹಿತಿ ಶಿಬಿರ:
ಬಾಯಿಯ ಆರೋಗ್ಯದ ಬಗ್ಗೆ ಡಾ.ಚಾಂದಿನಿ.ಎಸ್. ಹಾಗೂ ಸೈಬರ್ ಕ್ರೈಂ ಜಾಗೃತಿ ಬಗ್ಗೆ ಪ್ರವೀಣ್ ಉಡುಪ ಅವರು ಹಿರಿಯ ನಾಗರಿಕರಿಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಹಿರಿಯ ನಾಗರಿಕರಿಗಾಗಿ ಯೇನೆಪೊಯ ಆಯುರ್ವೇದ ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಸಹಯೋಗದಲ್ಲಿ ಉಚಿತ ದಂತ ತಪಾಸಣಾ ಶಿಬಿರ ನಡೆಯಿತು.

Share This Article
Leave a Comment