ಮಂಗಳೂರು : ಜಪ್ಪಿನಮೊಗರಿನಲ್ಲಿ ಕ್ರೀಡಾ ಸಂಭ್ರಮ : ಗಣೇಶೋತ್ಸವದ ಅಂಗವಾಗಿ ಗ್ರಾಮೀಣ ಕ್ರೀಡೋತ್ಸವ.

Prakhara News
2 Min Read

ಮಂಗಳೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಜಪ್ಪಿನಮೊಗರು ಇದರ 18ನೇ ವರ್ಷದ ಜಪ್ಪಿನಮೊಗರು ಶ್ರೀ ಗಣೇಶೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಮಂಗಳೂರು ಪಂಪ್‌ವೆಲ್ ಕಲ್ಪವೃಕ್ಷದ ಸಹಕಾರದೊಂದಿಗೆ ಗ್ರಾಮೀಣ ಕ್ರೀಡೋತ್ಸವವನ್ನು ಇಂದು ಜಪ್ಪಿನಮೊಗರಿನಲ್ಲಿ ಆಯೋಜಿಸಲಾಯಿತು.

ವೇದಿಕೆಯಲ್ಲಿದ್ದ ಗಣ್ಯರಿಗೆ ಶಾಲು ಹೊದಿಸಿ ಗೌರವಿಸುವ ಮೂಲಕ ಕಾರ್ಯಕ್ರಮ ಆರಂಭಗೊಂಡಿದ್ದು, ಬಳಿಕ ದೀಪ ಪ್ರಜ್ವಲನೆ ನೆರವೇರಿಸಿ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು. ಮಾಜಿ ಕಾರ್ಪೊರೇಟರ್ ನಾಗೇಂದ್ರ ಸ್ವಾಗತಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಮೇಶ್ ಸಾಲಿಯಾನ್ ಬಜಾಲ್, ಸಾಮಾಜಿಕ ಕಾಳಜಿಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ನಾಗೇಂದ್ರ ಅವರ ಕಾರ್ಯವನ್ನು ಶ್ಲಾಘಿಸಿದರು. ಗ್ರಾಮೀಣ ಕ್ರೀಡೋತ್ಸವವು ಮತ್ತಷ್ಟು ಯಶಸ್ವಿಯಾಗಲಿ ಎಂದು ಹಾರೈಸಿದರು.

ಉಮೇಶ್ ಅಧಿಕಾರಿ ಮಾತನಾಡಿ, ಈ ಕ್ರೀಡೋತ್ಸವವು ಊರಿನ ಜಾತ್ರೆಯಂತೆಯೇ ಸಂಭ್ರಮದಿಂದ ನಡೆಯುತ್ತಿದ್ದು, ಜನರ ಸೇವೆಗೆ ಪೂರಕವಾದ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.

ಬಳಿಕ ಕ್ರೀಡಾಕೂಟದ ತೀರ್ಪುಗಾರರು ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವವರನ್ನು ಸನ್ಮಾನಿಸಲಾಯಿತು.

ಆರ್ಯ ಮರಾಠ ಭವನದ ಮೋಹನ್ ರಾವ್ ಎಕ್ಕೂರು ಮಾತನಾಡಿ, ಕ್ರೀಡೆ ದೈಹಿಕ ಆರೋಗ್ಯಕ್ಕೆ ಅತ್ಯಂತ ಮುಖ್ಯವಾಗಿದೆ. ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಯುವಕರಿಗೆ ಸ್ಫೂರ್ತಿ ದೊರೆಯುತ್ತದೆ. ಕ್ರೀಡೆಯಲ್ಲಿ ಗೆಲುವಿಗಿಂತಲೂ ಪಾಲ್ಗೊಳ್ಳುವಿಕೆ ಮುಖ್ಯ ಎಂದು ಹೇಳಿದರು.
ಬಳಿಕ ಗಣ್ಯರು ಮೈದಾನದಲ್ಲಿ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದರು.

ಕ್ರೀಡೋತ್ಸವದ ಅಂಗವಾಗಿ ವಿವಿಧ ವಯೋಮಾನದವರು, ಮಹಿಳೆಯರು ಹಾಗೂ ಪುರುಷರಿಗಾಗಿ ಹಲವು ಮನರಂಜನಾ ಮತ್ತು ತಂಡ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಹಿಳೆಯರಿಗಾಗಿ ಥ್ರೋಬಾಲ್ ಹಾಗೂ ಹಗ್ಗಜಗ್ಗಾಟ, ಪುರುಷರಿಗಾಗಿ ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿವೆ. ಮಕ್ಕಳು ಹಾಗೂ ಮಹಿಳೆಯರಿಗಾಗಿ ವಿವಿಧ ಮನರಂಜನಾ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ.
ಇದರ ಜೊತೆಗೆ ಎಲ್ಲರಿಗೂ ಮುಕ್ತವಾಗಿರುವ ಮಡಿಕೆ ಒಡೆಯುವ ಸ್ಪರ್ಧೆಯೂ ನಡೆಯಲಿದೆ. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ತೆಂಗಿನ ಗರಿಯಿಂದ ಪೊರಕೆ ತಯಾರಿಸುವ ಸ್ಪರ್ಧೆ ಹಾಗೂ ತೆಂಗಿನಕಾಯಿ ಸಿಪ್ಪೆ ಸುಲಿಯುವ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಸ್ಥಳೀಯ ಸಂಪ್ರದಾಯ ಮತ್ತು ಗ್ರಾಮೀಣ ಕೌಶಲ್ಯಗಳನ್ನು ಪರಿಚಯಿಸುವ ಉದ್ದೇಶ ಹೊಂದಿದೆ.

ಈ ಸಂದರ್ಭದಲ್ಲಿ ಗೀತಾ, ಹರೀಶ್ ಚಂದ್ರ, ಜಗದೀಶ್, ಮೋಹಿನಿ ಗಟ್ಟಿ, ಶ್ರೀನಿವಾಸ್ ಗಟ್ಟಿ, ಧನುಷ್ ಸಾಲಿಯಾನ್ ಬಜಾಲ್, ಮೋಹನ್ ರಾವ್, ಉಮೇಶ್ ಅಧಿಕಾರಿ, ಉಮಾನಾಥ್ ಪೂಜಾರಿ, ನಾರಾಯಣ ಸಪಾಳ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
Leave a Comment