
ಮಂಗಳೂರು: ನೆರೆಮನೆಯವರನ್ನು ಕೊಲ್ಲುವ ಉದ್ದೇಶದಿಂದ ಕಾರಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮಹಿಳೆಯೊಬ್ಬರು ರಸ್ತೆಯ ಬದಿಯ ಕಾಂಪೌಂಡ್ ಗೋಡೆಯ ಮೇಲೆ ತಲೆಕೆಳಗಾಗಿ ನೇತಾಡಿದ ಆಘಾತಕಾರಿ ಘಟನೆ ನಗರದ ಬಿಜೈ ಕಾಪಿಕಾಡ್‌ನ ಆರನೇ ರಸ್ತೆಯಲ್ಲಿ ನಡೆದಿದೆ.
ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿವೃತ್ತ ಬಿಎಸ್‌ಎನ್‌ಎಲ್ ಉದ್ಯೋಗಿ ಸತೀಶ್ ಕುಮಾರ್ ಕೆ.ಎಂ. ಮತ್ತು ನೆರೆಮನೆಯ ನಿವಾಸಿ ಮುರಳಿ ಪ್ರಸಾದ್ ನಡುವೆ ದೀರ್ಘಕಾಲದಿಂದ ದ್ವೇಷವಿತ್ತು. ಸತೀಶ್ ಕುಮಾರ್ ಕೆ.ಎಂ. ಪದೇ ಪದೇ ಮುರಳಿ ಪ್ರಸಾದ್ ಅವರೊಂದಿಗೆ ಜಗಳವಾಡುತ್ತಿದ್ದರು. ಮಾರ್ಚ್ 13 ರಂದು ಬೆಳಿಗ್ಗೆ 8:15 ರ ಸುಮಾರಿಗೆ ಮುರಳಿ ಪ್ರಸಾದ್ ತಮ್ಮ ಬೈಕ್‌ನಲ್ಲಿ ಮನೆಯಿಂದ ಹೊರಗೆ ಹೋಗುತ್ತಿದ್ದಾಗ, ಸತೀಶ್ ಕುಮಾರ್ ಕೆ.ಎಂ. ಉದ್ದೇಶಪೂರ್ವಕವಾಗಿ ತಮ್ಮ ಕಾರನ್ನು ಅತೀ ವೇಗವಾಗಿ ಚಲಾಯಿಸಿ ಮುರಳಿ ಪ್ರಸಾದ್ ಅವರ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ರಭಸಕ್ಕೆ ಕಾರು ಬೈಕನ್ನು ತಳ್ಳಿಕೊಂಡು ಮುಂದೆ ಸಾಗಿ, ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಎತ್ತಿ ಕಾಂಪೌಂಡ್ ಗೋಡೆಯ ಮೇಲೆ ತಲೆಕೆಳಗಾಗಿ ನೇತಾಡುವಂತೆ ಮಾಡಿದೆ. ಘಟನೆಯಲ್ಲಿ ಮಹಿಳೆ ಮತ್ತು ಮುರಳಿ ಪ್ರಸಾದ್ ಇಬ್ಬರೂ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸತೀಶ್ ಕುಮಾರ್ ಕೆ.ಎಂ. ಅವರನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆಯಲಾಗಿದೆ. ಇದಲ್ಲದೆ, ನಿರ್ಲಕ್ಷ್ಯತನದಿಂದ ಕಾರು ಚಲಾಯಿಸಿ ಮಹಿಳೆಗೆ ಡಿಕ್ಕಿ ಹೊಡೆದ ಬಗ್ಗೆ ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.