
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಳೂರು ಮಂಗಳಪೇಟೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾರ್ಚ್.11ರ ಮಂಗಳವಾರ ಮಧ್ಯರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಮೃತಪಟ್ಟ ಘಟನೆ ನಡೆದಿದೆ. ಈ ಅಪಘಾತದಲ್ಲಿ ಮತ್ತೊಬ್ಬ ಸವಾರ ತೀವ್ರ ಗಾಯಗೊಂಡಿದ್ದಾರೆ.



ಮೃತ ಯುವಕನನ್ನು ಕಾಪು ನಿವಾಸಿ ಪ್ರತೀಶ್ ಪ್ರಸಾದ್ (21) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ನಿಹಾಲ್ ವಿಲ್ಸನ್ ಎಂದು ಗುರುತಿಸಲಾಗಿದೆ.


ಪೊಲೀಸರ ಪ್ರಕಾರ, ಮಂಗಳವಾರ ರಾತ್ರಿ ಪ್ರತೀಶ್ ಪ್ರಸಾದ್ ಮತ್ತು ನಿಹಾಲ್ ವಿಲ್ಸನ್ ಸ್ಕೂಟಿಯಲ್ಲಿ ಕಾಪುವಿನಿಂದ ಪಡುಬಿದ್ರಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ಅಪರಿಚಿತ ವಾಹನವು ಅವರ ಸ್ಕೂಟಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.
ಅಪಘಾತದ ನಂತರ ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಆದರೆ, ತೀವ್ರ ಗಾಯಗೊಂಡಿದ್ದ ಪ್ರತೀಶ್ ಪ್ರಸಾದ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮೃತ ಯುವಕ ಪ್ರತೀಶ್ ಪ್ರಸಾದ್, ಕಾಪುವಿನ ಹಿರಿಯ ಛಾಯಾಗ್ರಾಹಕ ಭಕ್ತಪ್ರಸಾದ್ ಮತ್ತು ಉಷಾ ಭಕ್ತಪ್ರಸಾದ್ ದಂಪತಿಯ ಪುತ್ರನಾಗಿದ್ದು, ಈ ದುರ್ಘಟನೆ ಅವರ ಕುಟುಂಬದವರಿಗೆ ಆಘಾತವನ್ನುಂಟುಮಾಡಿದೆ.
ಈ ಪ್ರಕರಣ ಸಂಬಂಧಿಸಿದಂತೆ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲ್ಪಟ್ಟಿದ್ದು, ಪೊಲೀಸರು ಅಪರಿಚಿತ ವಾಹನ ಮತ್ತು ಚಾಲಕನ ಪತ್ತೆಗೆ ಮುಂದಾಗಿದ್ದಾರೆ.