
ಮುತ್ತೂರು ಗ್ರಾಮ ಪಂಚಾಯತ್ ನ ನೂತನ ಸಂಜೀವಿನಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ನಿನ್ನೆ ನಡೆಯಿತು.



ಕಟ್ಟಡದ ಉದ್ಘಾಟನೆಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಇವರು ನೆರವೇರಿಸಿದರು . ನರೇಗಾ ಯೋಜನೆಯಲ್ಲಿ 17.50 ಲಕ್ಷ ಹಾಗೂ ಪಂಚಾಯತ್ ನ 15 ನೇ ಹಣಕಾಸು ಯೋಜನೆಯಲ್ಲಿ 2.50 ಲಕ್ಷ ಅನುದಾನದಲ್ಲಿ ನಿರ್ಮಿತವಾದ ಸಂಜೀವಿನಿ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಮುತ್ತೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ಕೊಟ್ಟರು ಬಳಿಕ ಮಾತನಾಡಿದ ಅವರು ಸಂಜೀವಿನಿ ಕಟ್ಟಡದ ಉದ್ದೇಶ ಮಹಿಳಾ ಸಬಲೀಕರಣ , ಮಹಿಳೆಯರು ಸ್ವಉದ್ಯೋಗ ಮಾಡುವ ಮೂಲಕ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕೆಂದು ಹೇಳಿದರು.


ಕರ್ನಾಟಕ ವಿಧಾನ ಪರಿಷತ್ ನ ಶಾಸಕರಾದ ಕಿಶೋರ್ ಬಿ .ಆರ್ ಇವರು ಸಂಜೀವಿನಿ ಕಟ್ಟಡ ಹಾಗೂ ಇತರೆ ಕಾಮಗಾರಿಗಳ ಯೋಜನೆಗೆ ಅವಿರತವಾಗಿ ಶ್ರಮಿಸುವ ಗ್ರಾಮ ಪಂಚಾಯತ್ ನ ಸರ್ವ ಸದಸ್ಯರಿಗೂ ಅಭಿನಂದನೆಗಳನ್ನು ತಿಳಿಸುತ್ತಾ ಮುಂದೆಯೂ ಈ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಗ್ರಾಮ ಏಳಿಗೆಗಾಗಿ ಶ್ರಮಿಸಿ ಗ್ರಾಮಸ್ಥರ ಅಹವಾಲುಗಳಿಗೆ ಸ್ಪಂದಿಸಿ ಅವರೊಂದಿಗೆ ಇರಬೇಕು ಎಂದು ಹಾರೈಸಿದರು.
ಬಳಿಕ ಮಾತನಾಡಿದ ಉಪಾಧ್ಯಕ್ಷರಾದ ಸುಷ್ಮಾ ಇವರು ಮಹಿಳಾ ದಿನಾಚರಣೆಯ ಶುಭಾಶಯವನ್ನು ಕೋರುತ್ತಾ ಮಹಿಳೆ ಎಂಬುದು ಕೇವಲ ಹೆಣ್ಣು ಮಾತ್ರವಲ್ಲದೆ ಅವಳು ಮಕ್ಕಳಿಗೆ ತಾಯಿಯಾಗಿ , ಗಂಡನಿಗೆ ಮಡದಿಯಾಗಿ , ಮನೆಯ ಒಡತಿಯಾಗಿ ಸರ್ವ ರೀತಿಯಲ್ಲೂ ಜವಾಬ್ದಾರಿಯನ್ನು ನಿರ್ವಹಿಸಬಲ್ಲ ಒಬ್ಬ ಸೈನಿಕೆ ಎಂದು ಹೇಳಿದರು.
ಬಳಿಕ ಮಾತನಾಡಿದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾಗಿರುವ ಸತೀಶ್ ಪೂಜಾರಿ ಬಳ್ಳಾಜೆ ಇವರು ಸಂಜೀವಿನಿ ಕಟ್ಟಡವನ್ನು ಸಮರ್ಪಕವಾಗಿ ಬಳಸಿ ಪಂಚಾಯತ್ ಅಭಿವೃದ್ಧಿ ಕಾರ್ಯಕ್ಕೆ ಪ್ರೇರಣಾದಾಯಕವಾಗಬೇಕೆಂದು ಹರಸಿದರು.
ಈ ಸಂದರ್ಭದಲ್ಲಿ ಮುತ್ತೂರು ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ದುರ್ಗಾಕೊಡಿ , ಪುಷ್ಪಾ ನಾಯ್ಕ್ , ತಾರನಾಥ್ ಕುಲಾಲ್ , ಮಾಲತಿ , ತೋಮಸ್ ಹೆರಾಲ್ಡ್ ರೋಜಾರಿಯೋ , ವನಿತಾ , ರುಕ್ಮಿಣಿ , ಶಶಿಕಲಾ ಹಾಗೂ ಸಂಜೀವಿನಿ ಒಕ್ಕೂಟದ ವಿಜಯಶ್ರೀ ಜತೆಗಿದ್ದರು . ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿಯವರಾದ ಮಹೇಶ್ ಕುಮಾರ್ ಹೊಳ್ಳ , ಪಂಚಾಯತ್ ನ ಕಾರ್ಯದರ್ಶಿ ವಸಂತಿ ಹಾಗೂ ಪಂಚಾಯತ್ ಸಿಬ್ಬಂದಿಗಳು , ಪಂಚಾಯತ್ ನ ಮಾಜಿ ಅಧ್ಯಕ್ಷರುಗಳು , ಉಪಾಧ್ಯಕ್ಷರುಗಳು , ಸದಸ್ಯರುಗಳು , ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು , ಊರಿನ ಹಿರಿಯ ಮುಖಂಡರು , ವಿವಿಧ ಒಕ್ಕೂಟದ ಮಹಿಳಾ ಸದಸ್ಯರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಮೋದ್ ಎಸ್ ನಾಯ್ಕ್ ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು .