
ಮಂಗಳೂರು : ಸಾಮಾಜಿಕ ಕಾಳಜಿ ಹಾಗೂ ವೃತ್ತಿ ಬದ್ಧತೆಯ ಪತ್ರಕರ್ತರಾಗಿದ್ದ ದಿ. ಗುರುವಪ್ಪ ಬಾಳೆಪುಣಿ ಅವರು ತಮ್ಮ ಬರಹಗಳ ಮೂಲಕ ಸಾಮಾನ್ಯ ಸಾಧಕರು ಬದುಕು ಕಟ್ಟಿಕೊಂಡ ಬಗೆಯನ್ನು ಅನಾವರಣಗೊಳಿಸಿದ್ದಾರೆ ಎಂದು ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಹೇಳಿದರು.



ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಹಿರಿಯ ಪತ್ರಕರ್ತ ದಿ. ಗುರುವಪ್ಪ ಬಾಳೆಪುಣಿ ಅವರ ‘ದೊಡ್ಡವರು ಇವರು ಸನ್ಮಾನ್ಯರು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ‘ ವೈಯಕ್ತಿಕ ಬದುಕಿನಲ್ಲಿ ನೈತಿಕತೆ ಕಾಪಾಡಿಕೊಂಡಿದ್ದ ಬಾಳೆಪುಣಿ ತಾವು ಪತ್ರಿಕೆಯ ಮೂಲಕ ಪರಿಚಯಿಸಿದ ಸಾಮಾನ್ಯರಲ್ಲಿ ಸಾಮಾನ್ಯ ಸಾಧಕರ ಬಗ್ಗೆ ಪುಸ್ತಕವಾಗಿ ಪ್ರಕಟಿಸುವ ಪ್ರಯತ್ನ ನಡೆಸಿದ್ದರು. ಈಗ ಅವರ ಅಗಲಿಕೆಯ ಬಳಿಕ ಈ ಪುಸ್ತಕ ಬಿಡುಗಡೆಯಾಗುತ್ತಿರುವುದು ನೋವಿನ ಸಂಗತಿ ಎಂದರು.


ಕೃತಿಯ ಕುರಿತು ಮಾತನಾಡಿದ ಹೊಸದಿಗಂತ ಪತ್ರಿಕೆಯ ಸಿಇಒ ಪಿ.ಎಸ್. ಪ್ರಕಾಶ್ ‘ ಹತ್ತು ಮಂದಿ ಸಾಧಕರ ಬಗ್ಗೆ ಬರೆದಿರುವ ಬಾಳೆಪುಣಿ ಅವರ ಸಾಧನೆಯ ಜತೆಗೆ ಜೀವನದ ಮಜಲುಗಳನ್ನು ತೆರೆದಿಟ್ಟಿದ್ದಾರೆ. ಇಂದಿಗೂ ನಮ್ಮ ಸುತ್ತಮುತ್ತಲಿನ ಸಮಾಜದ ಪರಿಸ್ಥಿತಿ ಹೇಗಿದೆ ಎಂಬುದನ್ನು ಕೃತಿಯಲ್ಲಿ ವಿವರಿಸಿದ್ದಾರೆ ಎಂದರು.
ಕೃತಿ ಬಿಡುಗಡೆಗೊಳಿಸಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮಾತನಾಡಿ ‘ ಬಾಳೆಪುಣಿ ಅವರ ವರದಿಯಿಂದ ಸಾಮಾನ್ಯ
ವ್ಯಕ್ತಿಯಾದ ನಾನು ದೇಶದ ರಾಷ್ಟ್ರಪತಿ, ಪ್ರಧಾನಿ ಎದುರು ನಿಂತು ಸನ್ಮಾನ ಪಡೆಯುವ ಹಂತಕ್ಕೆ ಬೆಳೆದೆ. ಈಗ ಅವರ ಪುಸ್ತಕ ಬಿಡುಗಡೆ ಮಾಡುವ ಅವಕಾಶ ದೊರೆತದ್ದು ನನ್ನ ಭಾಗ್ಯ ’ಎಂದರು.
ಮುಖ್ಯ ಅತಿಥಿಗಳಾಗಿದ್ದ ಚಿತ್ತಾರ ಬಳಗದ ಸ್ಥಾಪಕ ಸಂಚಾಲಕ ಚಂದ್ರಶೇಖರ ಪಾತೂರು ಮತ್ತು ಪುಸ್ತಕ ಪ್ರಕಟಿಸಿದ ಅನಂತ ಪ್ರಕಾಶದ ಮಿಥುನ ಕೊಡೆತ್ತೂರು ಅವರು ಬಾಳೆಪುಣಿಯವರ ಜತೆಗಿನ ಒಡನಾಟವನ್ನು ಸ್ಮರಿಸಿದರು. ಕೃತಿಯ ಪ್ರಕಾಶಕ ಮಿಥುನ
ಕೊಡೆತ್ತೂರುಮತ್ತು ಪುಟ ವಿನ್ಯಾಸ ನಡೆಸಿದ ಹರೀಶ್ ಕೊಡೆತ್ತೂರು ಅವರನ್ನು ಹಿರಿಯ ಪತ್ರಕರ್ತ ಕೆ.ಆನಂದ ಶೆಟ್ಟಿ ಅವರು ಸನ್ಮಾನಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್‌ನ ರಾಮಕೃಷ್ಣ ಆರ್. , ಹೊಸದಿಗಂತ ಪತ್ರಿಕೆಯ ಸಂಪಾದಕ ಪ್ರಕಾಶ್ ಇಳಂತಿಲ, ಗುರುವಪ್ಪ ಬಾಳೆಪುಣಿಯವರ ಪುತ್ರ ಮನೇಶ್ ಬಾಳೆಪುಣಿ, ಪತ್ನಿ ಜಯಂತಿ, ಕುಟುಂಬಸ್ಥರಾದ ಸುಧೀರ್, ಸುಂದರ ಸುರತ್ಕಲ್ ಉಪಸ್ಥಿತರಿದ್ದರು.ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಪತ್ರಕರ್ತ ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು.