Home ಕರಾವಳಿ ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನಕ್ಕೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಸಂತಾಪ

ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನಕ್ಕೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಸಂತಾಪ

0

ಮಂಗಳೂರು: ಹಿರಿಯ ಪತ್ರಕರ್ತ ಹಾಗೂ ಹೊಸ ದಿಗಂತ ಪತ್ರಿಕೆ ವಿಶೇಷ ವರದಿಗಾರರಾಗಿದ್ದ ಗುರುವಪ್ಪ ಎನ್.ಟಿ. ಬಾಳೆಪುಣಿ ಅವರ ನಿಧನಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ತೀವ್ರ ಸಂತಾಪ ಸೂಚಿಸಿದ್ದಾರೆ.

ಹಲವು ದಶಕಗಳ ಕಾಲ ಸಂಯುಕ್ತ ಕರ್ನಾಟಕ, ಕರಾವಳಿ ಅಲೆ, ಮಂಗಳೂರು ಮಿತ್ರ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಬಾಳೆಪುಣಿ ಅವರ ಅಗಲಿಕೆ ಅಪಾರ ನೋವುಂಟು ಮಾಡಿದೆ. ಕರಾವಳಿಯ ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿರುವ ಹೊಸದಿಗಂತದಲ್ಲಿ ಸುಮಾರು 26 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಹಲವು ಜನಪರ, ಸಾಮಾಜಿಕ ಕಳಕಳಿಯ ವಿಶೇಷ ವರದಿಗಳನ್ನು ಬರೆದು ಗಮನಸೆಳೆದಿದ್ದರು. ಒಬ್ಬ ಪತ್ರಕರ್ತನಾಗಿ ಸಾಮಾಜಿಕ ಜವಾಬ್ದಾರಿಯ ವರದಿಗಳತ್ತ ಹೆಚ್ಚಿನ ಆಸಕ್ತಿ, ಬದ್ಧತೆಯನ್ನು ಬೆಳೆಸಿಕೊಂಡಿದ್ದ ಬಾಳೆಪುಣಿ ಅವರು ಯುವ ಪತ್ರಕರ್ತರಿಗೆ ಮಾದರಿಯಾಗಿದ್ದಾರೆ ಎಂದು ಕ್ಯಾ. ಚೌಟ ಅವರು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.

ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು 2004ರಲ್ಲಿ ತಮ್ಮ ಬರವಣಿಗೆಯ ಮೂಲಕ ಹೊರ ಜಗತ್ತಿಗೆ ಪರಿಚಯಿಸಿದವರು ಬಾಳೇಪುಣಿಯವರು. ಕಿತ್ತಾಳೆ ಮಾರಾಟ ಮಾಡುತ್ತಿದ್ದ ಹಾಜಬ್ಬ ಅವರಿಗೆ ಪದ್ಮಶ್ರೀಯಂಥ ಅತ್ಯುನ್ನತ ಪ್ರಶಸ್ತಿ ಬಂದಿದ್ದರೆ ಅದಕ್ಕೆ ಬಾಳೆಪುಣಿ ಅವರ ವರದಿಯೂ ಒಂದು ಕಾರಣ. ಹೀಗಿರುವಾಗ, ನಮ್ಮ ಜಿಲ್ಲೆಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸುವಂತಹ ವರದಿ-ಲೇಖನಗಳನ್ನು ಬರೆಯುತ್ತಿದ್ದ ಬಾಳೆಪುಣಿ ಅವರಂಥ ಪತ್ರಕರ್ತರು ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ ಎಂದು ಕ್ಯಾ. ಚೌಟ ತಮ್ಮ ನುಡಿನಮನದಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here