ಉಳ್ಳಾಲ: ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ ಕೈಯಲ್ಲಿ ಕತ್ತಿ ಹಿಡಿದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿ, ಬೆದರಿಕೆಯೊಡ್ಡುತ್ತಿದ್ದ ರೌಡಿ ಶೀಟರ್ ಸೇರಿದಂತೆ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಶನಿವಾರ ತಡರಾತ್ರಿ ಬಂಧಿಸಿದ್ದಾರೆ.


ಸಿಸಿಟಿವಿ ವಿಡಿಯೋ ವೈರಲ್:
ಶನಿವಾರ ತಡರಾತ್ರಿ ಸುಮಾರು 12:00 ರಿಂದ 12:20ರ ಸುಮಾರಿಗೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಮಹಮ್ಮದ್ ಶಕೀರ್ ಮದ್ಯಸೇವನೆ ಮಾಡಿ, ಸಾರ್ವಜನಿಕ ಸ್ಥಳದಲ್ಲಿ ಮಾರಕ ಅಸ್ತ್ರವಾದ ಕತ್ತಿಯನ್ನು ಹಿಡಿದು ರಂಪಾಟ ನಡೆಸಿದ್ದ. ಕತ್ತಿ ಝಳಪಿಸುತ್ತಾ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದ ದೃಶ್ಯಗಳು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.



