Home ಕರಾವಳಿ ಸುರತ್ಕಲ್ : ಬೈಕ್ ಗೆ ಬಸ್ ಢಿಕ್ಕಿ ಹೊಡೆದು ಸವಾರ ಮೃತ್ಯು

ಸುರತ್ಕಲ್ : ಬೈಕ್ ಗೆ ಬಸ್ ಢಿಕ್ಕಿ ಹೊಡೆದು ಸವಾರ ಮೃತ್ಯು

0

ಸುರತ್ಕಲ್ : ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರರೊಬ್ಬರನ್ನು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬೆನ್ನು ಹತ್ತಿದ ವೇಳೆ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಸುರತ್ಕಲ್ ನ ಕಾನ ಕುಳಾಯಿ ಗುಡ್ಡೆ ಜಂಕ್ಷನ್‌ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮೃತರನ್ನು ಕಾನ ನಿವಾಸಿ ರೆಮ್ಮಿ (38) ಎಂದು ಗುರುತಿಸಲಾಗಿದೆ.

ಘಟನೆ ಸಂಭವಿಸುತ್ತಿದ್ದಂತೆ ದ್ವಿಚಕ್ರ ವಾಹನ ಬೆನ್ನಟ್ಟಿದ್ದ ಪೊಲೀಸ್ ಸಿಬ್ಬಂದಿ ಬಸ್ ಹತ್ತಿ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಕುಳಾಯಿಯಲ್ಲಿ ಟ್ಯೂಶನ್‌ಗೆ ತೆರಳಿದ್ದ ಮಗಳನ್ನು ಕರೆತರಲೆಂದು ರೆಮ್ಮಿ ತನ್ನ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದರೆನ್ನಲಾಗಿದೆ. ಕುಳಾಯಿಗುಡ್ಡೆ ಜಂಕ್ಷನ್ ಬಳಿ ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದ ಮಂಗಳೂರು ಉತ್ತರ ಸಂಚಾರ ಪೊಲೀಸರು ರೆಮ್ಮಿಯನ್ನು ಬೆನ್ನಟ್ಟಿ ಹಿಡಿಯಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನು ಗಮನಿಸಿದ ರೆಮ್ಮಿ ಸುರತ್ಕಲ್ ಕಡೆಗೆ ತನ್ನ ದ್ವಿಚಕ್ರ ವಾಹನವನ್ನು ತಿರುಗಿಸಿದಾಗ ಎದುರಿನಿಂದ ಬರುತ್ತಿದ್ದ ಖಾಸಗಿ ಸಿಟಿ ಬಸ್ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಅಪಘಾತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ರೆಮ್ಮಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟರೆಂದು ತಿಳಿದು ಬಂದಿದೆ. ಅಪಘಾತ ನಡೆದ ಬೆನ್ನಲ್ಲೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಪೊಲೀಸರ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಅಪಘಾತಕ್ಕೆ ಪೊಲೀಸರ ಅನಾಗರಿಕ ವರ್ತನೆಯೇ ಕಾರಣ. ತಪ್ಪಿತಸ್ಥ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಸಾರ್ವಜನಿಕರು ಸುರತ್ಕಲ್ – ಕಾನ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

LEAVE A REPLY

Please enter your comment!
Please enter your name here