ಮಂಗಳೂರು : ಹಲವು ಸವಾಲುಗಳ ನಡುವೆಯೂ ಜನರ ಪ್ರೀತಿ, ವಾತ್ಸಲ್ಯದಿಂದಾಗಿ 140ಕ್ಕೂ ಅಧಿಕ ತೂಗು ಸೇತುವೆಗಳನ್ನು ನಿರ್ಮಿಸಲು ಸಾಧ್ಯವಾಗಿದೆ . ನಾನು ನಿರ್ಮಿಸಿದ ತೂಗು ಸೇತುವೆಗಳ ಜತೆ ಜನರು ಈಗಲೂ ಭಾವನಾತ್ಮಕ ಸಂಪರ್ಕ ಹೊಂದಿದ್ದಾರೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ ಎಂದೇ ಖ್ಯಾತರಾಗಿರುವ ಗಿರೀಶ್ ಭಾರದ್ವಾಜ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಮಂಗಳೂರು ಪ್ರೆಸ್ ಕ್ಲಬ್ ಗೌರವ ಸ್ವೀಕರಿಸಿ, ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ 40 ವರ್ಷಗಳ ವೃತ್ತಿ ಜೀವನದ ಸಾಧನೆಗಳನ್ನು ಮೆಲುಕು ಹಾಕಿದರು.
ಹುಟ್ಟೂರು ಸುಳ್ಯದ ಅರಂಬೂರು ಗ್ರಾಮದಲ್ಲಿ ಮೊದಲ ತೂಗು ಸೇತುವೆ ನಿರ್ಮಿಸಿದೆ. ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರೂ ಸಿವಿಲ್ ಇಂಜಿನಿಯರ್ ಆದೆ. ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲೂ ತೂಗು ಸೇತುವೆಗಳನ್ನು ನಿರ್ಮಿಸಿದ್ದೇನೆ. ಅತ್ಯಂತ ಕುಗ್ರಾಮದಲ್ಲಿ ನಿರ್ಮಿಸಿದ ತೂಗು ಸೇತುವೆಗಳು ಆ ಹಳ್ಳಿಗರಿಗೆ ಹೊರ ಪ್ರಪಂಚದ ಸಂಪರ್ಕ ಒದಗಿಸುವ ಜತೆಗೆ ಹಿಂದುಳಿದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕಾರಣವಾಗಿದೆ. ಇದು ಸಂತಸ ತಂದುಕೊಟ್ಟ ವಿಚಾರ ಎಂದು ಅವರು ಹೇಳಿದರು.
ಒಡಿಶಾದಲ್ಲಿ ಕೆಲಸ ಮಾಡುತ್ತಿದ್ದಾಗ ನಕ್ಸಲರ ಮುಖಾಮುಖಿಯೂ ಆಗಿತ್ತು. ಆದರೆ ಅಲ್ಲಿನ ಬಡ ಜನರಿಗೆ ಸಹಾಯ ಮಾಡಬೇಕಾದ ಕಾರಣ ಹಿಂದೆ ಸರಿಯಲಿಲ್ಲ. ಒಂದು ಪ್ರದೇಶದಲ್ಲಂತೂ ಸೇತುವೆ ನಿರ್ಮಿಸುವುದು ಅತ್ಯಂತ ಸವಾಲಾಗಿತ್ತು. ಆ ಹಳ್ಳಿಗರು ದೇವರ ಮೇಲೆ ಭಾರ ಹಾಕಿ ಹೊಳೆ ದಾಟುವ ದುಃಸ್ಥಿತಿಯು ಮನ ಮುಟ್ಟಿತು. ಎಲ್ಲ ಸವಾಲುಗಳನ್ನು ಮೀರಿ ತೂಗು ಸೇತುವೆ ನಿರ್ಮಿಸಿದೆ. ಇದಾದ ಬಳಿಕ ಗ್ರಾಮಸ್ಥರು ತೋರಿದ ಪ್ರೀತಿ ವಿಶ್ವಾಸ ದೊಡ್ಡದು .ನನ್ನ ಇಂಜಿನಿಯರಿಂಗ್ ೆಲಸದಿಂದ ನಾನು ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿರಬಹುದು. ಆದರೆ ಜನರ ಸಂತೋಷದ ಕಣ್ಣೀರು ದೊಡ್ಡ ಪ್ರಶಸ್ತಿ ಎಂದು ಭಾರದ್ವಾಜ್ ಸ್ಮರಿಸಿದರು.
ಅರಂಬೂರು ಗ್ರಾಮದಲ್ಲಿ 40 ವರ್ಷಗಳ ಹಿಂದೆ ಮೊದಲ ತೂಗು ಸೇತುವೆ ನಿರ್ಮಿಸಿದ್ದೆ. ಎರಡು ವರ್ಷಗಳ ಹಿಂದಷ್ಟೇ ಅಲ್ಲಿ ಕಾಂಕ್ರಿಟ್ ಸೇತುವೆ ನಿರ್ಮಿಸಲು ಮುಂದಾದಾಗ ತೂಗುಸೇತುವೆ ತೆಗೆದುಹಾಕಲು ಗ್ರಾಮಸ್ಥರು ಅಧಿಕಾರಿಗಳಿಗೆ ಅವಕಾಶ ನೀಡಲಿಲ್ಲ. ಪ್ರವಾಸಿಗರು ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ತೂಗು ಸೇತುವೆ ನೋಡಲು ಬರುತ್ತಿದ್ದಾರೆ .ಈಗ ತಂತ್ರಜ್ಞಾನ ಮುಂದುವರಿದಂತೆ ತೂಗು ಸೇತುವೆಗಳು ಕನಿಷ್ಠ 100 ವರ್ಷ ಬಾಳ್ವಿಕೆ ಬರುವಂತೆ ನಿರ್ಮಿಸಲಾಗುತ್ತಿದೆ ಎಂದರು.
ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಕಾರ್ಯಕ್ರಮ ಉದ್ಘಾಟಿಸಿದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಭಾಸ್ಕರ ರೈ ಕಟ್ಟ ವಂದಿಸಿದರು. ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.