ಉಪ್ಪಿನಂಗಡಿ: ಬಸ್ ನಿಲ್ದಾಣದಲ್ಲಿ ಬಸ್ ಹಿಮ್ಮುಖವಾಗಿ ಚಲಿಸಿ ಬಸ್ಸನ್ನೇರಲು ಮುಂದಾದ ವಿದ್ಯಾಥಿಯೋರ್ವನ ಕಾಲಿನ ಮೇಲೆ ಚಕ್ರ ಹರಿದು ವಿದ್ಯಾರ್ಥಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡ ವಿದ್ಯಾರ್ಥಿಯನ್ನು ಉಪ್ಪಿನಂಗಡಿಯ ಗಾಂಧಿ ಪಾರ್ಕ್ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ, ಮುಹಮ್ಮದ್ ಅಝೀಂ (18) ಎಂದು ಗುರುತಿಸಲಾಗಿದೆ. ಈತ ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿಸಿಎ ವಿದ್ಯಾರ್ಥಿಯಾಗಿದ್ದಾನೆ. ಎಂದಿನಂತೆ ಕಾಲೇಜಿಗೆ ತೆರಳಲು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಬಸ್ಸನ್ನೇರಲು ಮುಂದಾಗಿದ್ದ ವೇಳೆ ಬಸ್ಸು ಹಿಮ್ಮುಖವಾಗಿ ಚಲಿಸಿದೆ.
ಈ ವೇಳೆ ಕಾಲಿನ ಮೇಲೆ ಬಸ್ಸಿನ ಚಕ್ರ ಹರಿದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಚಾಲಕ ಧನ್ಯರಾಜ್ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.