ಆಗಸ್ಟ್ 9 ರಂದು ಮಾಣಿಲ ಕ್ಷೇತ್ರಕ್ಕೆ ಪುತ್ತೂರಿನಿಂದ ಹೊರೆಕಾಣಿಕೆ ಸಮರ್ಪಣೆ: ಇಂದು ಕಚೇರಿ ಉದ್ಘಾಟನೆ

Prakhara News
1 Min Read

ಪುತ್ತೂರು: ಬಂಟ್ವಾಳ ತಾಲೂಕಿನ ಶ್ರೀಧಾಮ ಮಾಣಿಲದ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ 27ನೇ ವರ್ಷದ 48 ದಿನಗಳ ಶ್ರೀ ಮಹಾಲಕ್ಷ್ಮೀ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಅಂಗವಾಗಿ, ಪುತ್ತೂರಿನ ಭಕ್ತಾದಿಗಳಿಂದ ಆಗಸ್ಟ್ 9ರಂದು ‘ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಪುತ್ತೂರಿನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ಜುಲೈ 12ರಿಂದ ಆಗಸ್ಟ್ 28ರವರೆಗೆ ಒಂದು ಮಂಡಲದ ಅವಧಿಯಲ್ಲಿ ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಆಗಸ್ಟ್ 9ರಂದು ಬೆಳಿಗ್ಗೆ 10.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ವಿವಿಧ ವಾಹನಗಳ ಮೂಲಕ ಬೃಹತ್ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಶ್ರೀಧಾಮ ಮಾಣಿಲದತ್ತ ಹೊರಡಲಿದೆ ಎಂದು ಹೇಳಿದರು.

ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಡೆಯುವ ಈ ಪುಣ್ಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೊರೆಕಾಣಿಕೆಯನ್ನು ಯಶಸ್ವಿಗೊಳಿಸುವಂತೆ ಭಕ್ತರಲ್ಲಿ ಅವರು ಮನವಿ ಮಾಡಿದರು.

ಹೊರೆಕಾಣಿಕೆ ಸಂಗ್ರಹಣಾ ಕೇಂದ್ರವು ಆಗಸ್ಟ್ 6ರ ಬೆಳಿಗ್ಗೆಯಿಂದ ಆಗಸ್ಟ್ 9ರ ಬೆಳಿಗ್ಗೆಯವರೆಗೆ ಪುತ್ತೂರಿನ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಸುರೇಶ್ ಮತ್ತೂರಾಯ, ಸೀತಾರಾಮ ರೈ ಕೆದಂಬಾಡಿಗುತ್ತು, ಸಮಿತಿಯ ಅಧ್ಯಕ್ಷ ಕೃಷ್ಣ ಎಂ. ಅಳಿಕೆ, ನವೀನ್ ಕುಲಾಲ್ ಹಾಗೂ ಕುಲಾಲ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕುಲಾಲ್‌ ಉಪಸ್ಥಿತರಿದ್ದರು.

Share This Article
Leave a Comment