ಕುಂದಾಪುರ : ಇಲ್ಲಿಗೆ ಸಮೀಪದ ಕೋಡಿ ಬೀಚಿನಲ್ಲಿ ಕುಟುಂಬ ಸಮೇತರಾಗಿ ಬಂದಿದ್ದ ಸದಸ್ಯರ ಪೈಕಿ ಸಮುದ್ರದಲ್ಲಿ ಈಜಾಡಲು ಹೋಗಿ ಮೂವರು ಯುವಕರು ಸಮುದ್ರ ಪಾಲಾದ ಘಟನೆ ಶನಿವಾರ ಸಂಜೆ ನಡೆದಿದೆ. ತಕ್ಷಣದ ಮಾಹಿತಿಯಂತೆ ಅಂಪಾರು ಐದು ಸೆಂಟ್ಸ್ ನಿವಾಸಿ ದಾಮೋದರ್ ಪ್ರಭು ಎಂಬುವರ ಮಗ ಧನರಾಜ್ (23) ಸಾವನ್ನಪ್ಪಿದ್ದರೆ, ಇನ್ನೊಬ್ಬ ಮಗ ಧನುಷ್ (20) ಗಂಭೀರ ಸ್ಥಿತಿಯಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅವರ ಸಹೋದರನ ಪುತ್ರ ದರ್ಶನ್ (18) ಸಮುದ್ರ ಪಾಲಾಗಿದ್ದು ಇದುವರೆಗೆ ಪತ್ತೆ ಆಗಿರುವುದಿಲ್ಲ. ಮೂರು ಜನರು ಸಹೋದರರಾಗಿದ್ದು ಗಂಭೀರ ಸ್ಥಿತಿಯಲ್ಲಿರುವ ಧನುಷ್ ಸುರತ್ಕಲ್ ಎನ್ಐಟಿಕೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಶನಿವಾರ ಆಗಿದ್ದರಿಂದ ಮೂವರು ಸಹೋದರರು ಸಂಜೆ 6 ಗಂಟೆ ಸುಮಾರಿಗೆ ಕೊಡಿ ಬೀಚಿನಲ್ಲಿ ಈಜಾಡಲು ಬಂದಿದ್ದರು ಎನ್ನಲಾಗಿದೆ.
ಗಂಭೀರ ಗೊಂಡಿರುವ ಧನುಷ್ ಹಾಗೂ ಶವವಾಗಿ ಪತ್ತೆಯಾಗಿರುವ ಧನರಾಜ್ ಇಬ್ಬರು ಮುಖಕ್ಕೆ ಮಾಸ್ಕ್ ಮತ್ತು ಕಣ್ಣಿಗೆ ಕಣ್ಗವಚ ಧರಿಸಿದ್ದರು. ಮೇಲ್ನೋಟಕ್ಕೆ ಈಜಾಡಲು ಸಿದ್ದರಾಗಿ ಬಂದಿದ್ದರು ಎನ್ನಲಾಗಿದೆ. ಘಟನೆ ಸಂದರ್ಭ ಬೆಂಗಳೂರಿನ ಪ್ರವಾಸಿಗರುವರು ಗಮನಿಸಿ ತಕ್ಷಣ ಸಮುದ್ರಕ್ಕೆ ಹಾರಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ ಬಳಿಕ ಸ್ಥಳೀಯರು ಇಬ್ಬರನ್ನು ಕುಂದಾಪುರದ ಆಸ್ಪತ್ರೆಗೆ ಕಳುಹಿಸಲು ಸಹಕರಿಸಿದ್ದಾರೆ ಆದರೆ ದಾಮೋದರ ಪ್ರಭು ಅವರ ಅಣ್ಣನ ಮಗ ದರ್ಶನ್ ನಾಪತ್ತೆಯಾಗಿದ್ದು ಅವರ ಪತ್ತೆಗಾಗಿ ಈಜು ತಜ್ಞರು ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.