ಮಂಗಳೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣ; ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ..!

Prakhara News
2 Min Read

ಮಂಗಳೂರು : ಅಪ್ರಾಪ್ತ ಬಾಲಕಿಯ ಪ್ರೀತಿಯ ಮನವೊಲಿಸಿ ಅತ್ಯಾಚಾರ ಎಸಗಿದ್ದಲ್ಲದೆ, ಸ್ನಾನದ ವೀಡಿಯೊ ಸ್ಕ್ರೀನ್‌ಶಾಟ್ ತೆಗೆದು ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಜೀವ ಬೆದರಿಕೆಯೊಡ್ಡಿದ್ದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

ಕುಂಜತ್ತಬೈಲಿನ ದೇವಿನಗರ ನಿವಾಸಿ ಸೋನು ಮ್ಯಾಕ್ಲಿನ್ ನೊರೊನ್ಹ (20) ಶಿಕ್ಷೆಗೆ ಗುರಿಯಾದ ಆರೋಪಿ. ಈತನ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 130/2025 ರಂತೆ ಪ್ರಕರಣ ದಾಖಲಾಗಿತ್ತು.

ಆರೋಪಿ ಸೋನು ಮ್ಯಾಕ್ಲಿನ್ 2024ರ ಫೆಬ್ರವರಿಯಿಂದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವಂತೆ ಮನವೊಲಿಸಿದ್ದ. ಬಳಿಕ 2024ರ ಸೆಪ್ಟೆಂಬರ್‌ನಲ್ಲಿ ಶಕ್ತಿನಗರದ ಬಾಡಿಗೆ ಮನೆಯಲ್ಲಿ ಹಾಗೂ 2024ರ ನವೆಂಬರ್‌ನಿಂದ 2025ರ ಜೂನ್‌ ಅವಧಿಯಲ್ಲಿ ಅಳಪೆ ಗ್ರಾಮದ ಕೆಂಬಾರು ಕೆಇಬಿ ಮುಂಭಾಗದ ಮನೆಯಲ್ಲಿ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದ. ಅಲ್ಲದೆ, ಬಾಲಕಿ ಸ್ನಾನ ಮಾಡುತ್ತಿದ್ದಾಗ ವೀಡಿಯೊ ಕಾಲ್ ಮಾಡಿ, ನಗ್ನ ಚಿತ್ರಗಳ ಸ್ಕ್ರೀನ್‌ಶಾಟ್ ಸಂಗ್ರಹಿಸಿಟ್ಟುಕೊಂಡಿದ್ದ. ಮುಂದೆ ದೈಹಿಕ ಸಂಪರ್ಕಕ್ಕೆ ಬಾರದಿದ್ದರೆ ಚಿತ್ರಗಳನ್ನು ವೈರಲ್ ಮಾಡುವುದಾಗಿ ಹಾಗೂ ಬಾಲಕಿ, ಆಕೆಯ ತಾಯಿ ಮತ್ತು ಅಕ್ಕನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಕಂಕನಾಡಿ ನಗರ ಪೊಲೀಸ್ ಠಾಣೆಯ ಆಗಿನ ಇನ್ಸ್‌ಪೆಕ್ಟರ್ ಟಿ.ಡಿ. ನಾಗರಾಜ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾ ದೇವಿ ವಾದ ಮಂಡಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಆರೋಪಿಗೆ ಈ ಕೆಳಗಿನಂತೆ ಶಿಕ್ಷೆ ಪ್ರಕಟಿಸಿದ್ದಾರೆ:
ಕಲಂ 6 POCSO ಮತ್ತು ಕಲಂ 64 (2)(m) BNS: 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹50,000 ದಂಡ.
ಕಲಂ 77 BNS: 1 ವರ್ಷ ಜೈಲು ಶಿಕ್ಷೆ ಹಾಗೂ ₹5,000 ದಂಡ.
ಕಲಂ 15 POCSO: 1 ವರ್ಷ ಜೈಲು ಶಿಕ್ಷೆ ಹಾಗೂ ₹5,000 ದಂಡ.
ಕಲಂ 66 (E) IT Act: 1 ವರ್ಷ ಜೈಲು ಶಿಕ್ಷೆ ಹಾಗೂ ₹5,000 ದಂಡ.

Share This Article
Leave a Comment