ಮಂಗಳೂರು: ಸೈಬರ್ ವಂಚನೆಗಳ ತನಿಖೆ ಚುರುಕುಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ನಗರ ಕಮಿಷನರೆಟ್ ಗಳ ವ್ಯಾಪ್ತಿ ಸಹಿತ ಎಲ್ಲ ಜಿಲ್ಲೆಗಳ ಸೆನ್ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಪ್ರತಿಯೊಂದು ಠಾಣೆಗೂ ಡಿವೈಎಸ್ಪಿ ಅಥವಾ ಎಸಿಪಿ ದರ್ಜೆಯ ಅಧಿಕಾರಿ ಗಳನ್ನು ನಿಯೋಜಿಸಲಾಗುತ್ತಿದೆ.
ಇನ್ನು ಮುಂದೆ ಸೆನ್ ಪೊಲೀಸ್ ಠಾಣೆಗಳಿಗೆ ಡಿವೈಎಸ್ಪಿ ಹಾಗೂ ನಗರ ವ್ಯಾಪ್ತಿಯ ಸೆನ್ ಠಾಣೆಗಳಿಗೆ ಎಸಿಪಿಗಳು ಮುಖ್ಯಸ್ಥರಾಗಿರುತ್ತಾರೆ.
ಸೆನ್ ಠಾಣೆ ಮೇಲೆ ಹೊರೆ
ಸೈಬರ್ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೆನ್ ಠಾಣೆಗಳ ಮೇಲಿನ ಒತ್ತಡವೂ ಹೆಚ್ಚುತ್ತಿದೆ. ಈ ಹಿಂದಿದ್ದ ಸೈಬರ್ ಠಾಣೆ ಗಳನ್ನು ಸೆನ್ ಠಾಣೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಸೆನ್ ಠಾಣೆಗಳು ಸೈಬರ್ ಪ್ರಕರಣಗಳ ಜತೆಗೆ ಆರ್ಥಿಕ ವಂಚನೆ, ಮಾದಕದ್ರವ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸುತ್ತವೆ.
ದ.ಕ.ಕ್ಕೆ ಇನ್ಸ್ಪೆಕ್ಟರ್, ಉಡುಪಿಗೆ ಡಿವೈಎಸ್ಪಿ ಕೊರತೆ
ದ.ಕ. ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ವ್ಯಾಪ್ತಿ(ಗ್ರಾಮಾಂತರ)ಯಲ್ಲಿ ಮತ್ತು ಪೊಲೀಸ್ ಕಮಿಷನರೆಟ್(ನಗರ ವ್ಯಾಪ್ತಿ)ನಲ್ಲಿ ಪ್ರತ್ಯೇಕವಾದ ಎರಡು ಸೆನ್ ಪೊಲೀಸ್ ಠಾಣೆಗಳಿವೆ. ಜಿಲ್ಲಾ ಸೆನ್ ಠಾಣೆಯ ಮುಖ್ಯಸ್ಥರನ್ನಾಗಿ ಡಿವೈಎಸ್ಪಿಯವರನ್ನು ನಿಯೋಜಿಸಲಾಗಿದೆ. ಆದರೆ ಇಲ್ಲಿನ ಇನ್ಸ್ಪೆಕ್ಟರ್ ಹುದ್ದೆ ಭರ್ತಿಯಾಗದೆ 2 ವರ್ಷಗಳು ಕಳೆದಿವೆ. ಇಲ್ಲಿ ಪ್ರಭಾರ ಇನ್ಸ್ಪೆಕ್ಟರ್ ಗಳೇ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಹಾಗಾಗಿ ಪೂರ್ಣಕಾಲಿಕ ಇನ್ಸ್ಪೆಕ್ಟರ್ ಕೊರತೆ ಇದೆ. ಅಲ್ಲದೆ ಠಾಣೆಯ ಸಿಬಂದಿ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬೇಕಿದೆ. ಉಡುಪಿ ಜಿಲ್ಲೆಯ ಸೆನ್ ಠಾಣೆಯಲ್ಲಿ ಪೂರ್ಣಕಾಲಿಕ ಇನ್ಸ್ಪೆಕ್ಟರ್ ಇದ್ದಾರೆ. ಡಿವೈಎಸ್ಪಿ ನಿಯೋಜನೆ ಬಾಕಿ ಇದೆ.
ಬಲಗೊಂಡ ನಗರ ಸೆನ್ ಠಾಣೆ
ಮಂಗಳೂರು ನಗರ ಸೆನ್ ಪೊಲೀಸ್ ಠಾಣೆ ಮೇಲ್ದರ್ಜೆಗೇರಿ ಬಲಗೊಂಡಿದೆ. ಠಾಣೆಗೆ ಎಸಿಪಿ ಯವರನ್ನು ಪೂರ್ಣ ಕಾಲಿಕವಾಗಿ ನಿಯೋಜಿಸಲಾಗಿದೆ. ಜತೆಗೆ ಓರ್ವ ಇನ್ಸ್ಪೆಕ್ಟರ್, 8 ಎಸ್ಐಗಳಿದ್ದಾರೆ.
ಹೆಚ್ಚುತ್ತಲೇ ಇದೆ ವಂಚನೆ
ದ.ಕ. ಜಿಲ್ಲಾ ಸೆನ್ ಠಾಣೆಯಲ್ಲಿ ಈ ವರ್ಷ ಇದುವರೆಗೆ ಆನ್ಲೈನ್ ವಂಚನೆಗೆ ಸಂಬಂಧಿಸಿ 49 ಎಫ್ಐಆರ್ ಆಗಿದೆ. ಇದರ ಜತೆಗೆ ರಾಷ್ಟ್ರೀಯ ಪೋರ್ಟಲ್ ನಿಂದ(1930) ವರ್ಗಾವಣೆಗೊಂಡ ಪ್ರಕರಣಗಳೂ ಇವೆ. ತಿಂಗಳಿಗೆ ಸರಾಸರಿ 50ಕ್ಕೂ ಅಧಿಕ ದೂರುಗಳು ದಾಖಲಾಗುತ್ತವೆ. ಮಂಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 2023ರಲ್ಲಿ 195 ಪ್ರಕರಣಗಳು ದಾಖಲಾಗಿದ್ದು, ಈ ವರ್ಷ ಇದುವರೆಗೆ 35 ಪ್ರಕರಣಗಳು ದಾಖಲಾಗಿವೆ. ಸೈಬರ್ ಕ್ರೈಂ ಹೆಲ್ಪ್ಲೈನ್ (1930) ಮೂಲಕ ಮಂಗಳೂರು ಸೆನ್ ಠಾಣೆಗೆ ತಿಂಗಳಿಗೆ ಸರಾಸರಿ 200 ಕರೆಗಳು ಬರುತ್ತವೆ. ಉಡುಪಿ ಜಿಲ್ಲಾ ಸೆನ್ ಪೊಲೀಸ್ ಠಾಣೆಯಲ್ಲಿ ತಿಂಗಳಿಗೆ ಸರಾಸರಿ ವರ್ಷಕ್ಕೆ 150 ಪ್ರಕರಣಗಳು ದಾಖಲಾಗುತ್ತಿವೆ.