Home ಕರಾವಳಿ ಮಂಗಳೂರು: ಠೇವಣಿ ಮೊತ್ತ ಕಡಿತಗೊಳಿಸಿದ್ದ ಅಂಚೆ ಇಲಾಖೆ – ಬಡ್ಡಿ ಸಹಿತ ಪಾವತಿಸುವಂತೆ ಗ್ರಾಹಕ ನ್ಯಾಯಾಲಯ...

ಮಂಗಳೂರು: ಠೇವಣಿ ಮೊತ್ತ ಕಡಿತಗೊಳಿಸಿದ್ದ ಅಂಚೆ ಇಲಾಖೆ – ಬಡ್ಡಿ ಸಹಿತ ಪಾವತಿಸುವಂತೆ ಗ್ರಾಹಕ ನ್ಯಾಯಾಲಯ ಆದೇಶ

0

ಮಂಗಳೂರು: ನಿವೃತ್ತ ಶಿಕ್ಷಕಿಯೊಬ್ಬರು ತನ್ನ ಪಿಂಚಣಿ ಹಣವನ್ನು 5ವರ್ಷದ ಅವಧಿಗೆ ಅಂಚೆ ಕಚೇರಿಯಲ್ಲಿ ಠೇವಣಿ ಇರಿಸಿದ್ದರು. ಅವಧಿಗೂ ಮುನ್ನವೇ ಹಿಂಪಡೆದ ವೇಳೆ ಜಾರಣವಿಲ್ಲದೆ ಕಡಿತಗೊಳಿಸಿದ್ದ ಮೊತ್ತವನ್ನು ಬಡ್ಡಿ ಸಹಿತ ಶಿಕ್ಷಕಿಗೆ ಮರುಪಾವತಿಸುವಂತೆ ಮಂಗಳೂರು ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ. ಮಂಗಳೂರು ಮೂಲದ ನಿವೃತ್ತ ಶಿಕ್ಷಕಿ ರೀಟಾ ನೊರೋನ್ಹಾ ತಮ್ಮ ಪಿಂಚಣಿ ಹಣ 22ಲಕ್ಷ ರೂಪಾಯಿಯನ್ನು ಕಂಕನಾಡಿಯಲ್ಲಿರುವ ಅಂಚೆ ಕಚೇರಿಯಲ್ಲಿ 2020ರ ಫೆಬ್ರವರಿ 28ಕ್ಕೆ 5 ವರ್ಷಗಳ ಅವಧಿಗೆ ಜಮೆ ಮಾಡಿದ್ದರು. ಪ್ರತಿ ವರ್ಷ 1,74,355 ರೂಪಾಯಿ ಬಡ್ಡಿ ಪಾವತಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ತಕ್ಷಣದ ಹಣದ ಅವಶ್ಯಕತೆಯಿದ್ದರಿಂದ 2023ರ ಮೇ 18ರಂದು ಹಣವನ್ನು ಹಿಂಪಡೆಯಲು ಅಂಚೆ ಕಚೇರಿಗೆ ಮನವಿ ಮಾಡಿದ್ದರು. ಅಂಚೆ ಇಲಾಖೆ 22 ಲಕ್ಷದ ಬದಲಾಗಿ 20,20,994 ರೂಪಾಯಿ ಮೊತ್ತವನ್ನು ನಿವೃತ್ತ ಶಿಕ್ಷಕಿಯ ಖಾತೆಗೆ ವರ್ಗಾಯಿಸಿತ್ತು. 1,79,006 ರೂಪಾಯಿಗಳನ್ನು ಇಲಾಖೆ ಸಮರ್ಪಕ ಮಾಹಿತಿಯಿಲ್ಲದೆ ಕಡಿತಗೊಳಿಸಿತ್ತು. ಆದ್ದರಿಂದ ಅವರು ಈ ಅನ್ಯಾಯವನ್ನು ಪ್ರಶ್ನಿಸಿ 2023ರ ಜುಲೈ 13ರಂದು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಗ್ರಾಹಕ ನ್ಯಾಯಾಲಯವು 2024ರ ಸೆಪ್ಟೆಂಬರ್‌ 23ರಂದು ಅಂಚೆ ಕಚೇರಿ ತಡೆ ಹಿಡಿದಿದ್ದ 1,79,006 ರೂಪಾಯಿವನ್ನು ಶೇಕಡಾ 8ರ ಬಡ್ಡಿಯೊಂದಿಗೆ 45 ದಿನಗಳ ಒಳಗಾಗಿ ಮರುಪಾವತಿಸುವಂತೆ ಆದೇಶಿಸಿದೆ. ಅಲ್ಲದೆ 25 ಸಾವಿರ ರೂಪಾಯಿ ಪರಿಹಾರ ಮೊತ್ತ ಹಾಗೂ 10 ಸಾವಿರ ವ್ಯಾಜ್ಯದ ಖರ್ಚು ಪಾವತಿಸುವಂತೆ ಸೂಚಿಸಿದೆ.


LEAVE A REPLY

Please enter your comment!
Please enter your name here