ಮಂಗಳೂರು: ನಾಲ್ವರು ಅಪ್ರಾಪ್ತರು ಸೇರಿ ಒಟ್ಟು 11 ಮಂದಿ ಬಾಂಗ್ಲಾ ಪ್ರಜೆಗಳ ಬಂಧನ

Prakhara News
1 Min Read

ಮಂಗಳೂರು: ಉರ್ವಾ ಠಾಣೆ ವ್ಯಾಪ್ತಿಯ ಕೋಡಿಕಲ್ ಮತ್ತು ಕುಂಟಿಕಾನದಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಒಟ್ಟು 11 ಮಂದಿ ಬಾಂಗ್ಲಾ ನಿವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ನಾಲ್ವರು ಅಪ್ರಾಪ್ತರು ಅನ್ನುವ ಮಾಹಿತಿಯನ್ನು ಪೊಲೀಸರು ತಿಳಿಸಿದ್ದಾರೆ.

ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ನಿವಾಸಿಗಳಾದ ಕೌಸರ್ ಅಲಿ (21), ನೂರ್ ಅಮೀನ್ (34), ನಹೀದುಲ್ ಇಸ್ಲಾಂ (22), ಹುಮಾಯೂನ್ ಕಬೀರ್ (22), ರಮ್ಯಾನ್ ಅಲಿ(23), ಅಬ್ದುಲ್ ರಹಮಾನ್ (19), ನೂಯಾನ್ (24) ಮತ್ತು ಇತರ ನಾಲ್ಕು ಮಂದಿ ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇವೆರಲ್ಲ ರಾಜಶಾಹಿ ಜಿಲ್ಲೆಯ ಒಂದೇ ಭಾಗದ ನಿವಾಸಿಗಳೆಂದು ಪೊಲೀಸರು ದೃಢಪಡಿಸಿದ್ದಾರೆ.

ವಿದೇಶಿಗರ ಪ್ರಾದೇಶಿಕ ನೋಂದಣಿ ವಿಭಾಗಕ್ಕೆ ಮಾಹಿತಿ ನೀಡಲಾಗಿದ್ದು ಅವರನ್ನು ಗಡೀಪಾರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ. ಎಸ್‌ಐಆರ್ ಹಿನ್ನೆಲೆಯಲ್ಲಿ ಅಕ್ರಮವಾಗಿ ಕಟ್ಟಡ ಇನ್ನಿತರ ಕೆಲಸಗಳಿಗಾಗಿ ಬಂದು ಉಳಿಯುತ್ತಿರುವ ಕಾರ್ಮಿಕರ ಬಗ್ಗೆ ನಿಗಾ ಇಟ್ಟಿರುವ ಜನರು ಶಂಕೆಯ ಮೇರೆಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ.

ಪಶ್ಚಿಮ ಬಂಗಾಳಕ್ಕೆ ಬಂದು ಅಲ್ಲಿ ಸ್ಥಳೀಯ ಏಜಂಟರ ಮೂಲಕ ಅಕ್ರಮವಾಗಿ ಆಧಾರ್ ಕಾರ್ಡ್ ಮಾಡಿಸಿಕೊಂಡು ಬಳಿಕ ಭಾರತದ ಇತರ ಕಡೆಗಳಿಗೆ ಕೆಲಸಗಳಿಗಾಗಿ ತೆರಳುತ್ತಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಮಂಗಳೂರಿಗೆ ಇವರನ್ನು ಕೆಲಸಕ್ಕೆ ಕಳಿಸಿಕೊಟ್ಟ ಏಜಂಟರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment