ಮಂಗಳೂರು: ತಂದೆಯ ನಿಧನ ಹಿನ್ನೆಲೆಯಲ್ಲಿ ಊರಿಗೆ ಬರಲು ಯತ್ನಿಸಿದ ಸುಳ್ಯ ಮೂಲದ ಯುವಕನಿಗೆ ರಜೆ ಕೊಡದೆ, ಪಾಸ್ ಪೋರ್ಟ್ ತೆಗೆದಿಟ್ಟು ಸತಾಯಿಸಿದ ವಿಷಯ ತಿಳಿದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿದೇಶಾಂಗ ಇಲಾಖೆ ಮತ್ತು ಮಾಲ್ಡೀವ್ಸ್ ಎಂಬಸ್ಸಿ ಕಚೇರಿಯನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿದ ಬಗ್ಗೆ ವರದಿಯಾಗಿದೆ.



ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಗುರುಪ್ರಸಾದ್ ಗೋಳ್ಯಾಡಿ ಜೂ.20ರಂದು ನಿಧನರಾಗಿದ್ದು, ಅವರ ಮಗ ತ್ರಿಶೂಲ್ ಎರಡು ವರ್ಷಗಳಿಂದ ಮಾಲ್ಡೀವ್ಸ್ ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಂದೆಯ ನಿಧನದ ವಿಷಯ ತಿಳಿದು ಊರಿಗೆ ಬರಲು ಪ್ರಯತ್ನಿಸಿದ್ದರು. ಆದರೆ, ಕಂಪನಿಯವರು ರಜೆಯನ್ನೂ ಕೊಡದೆ ಕೆಲಸ ಬಿಟ್ಟು ಹೋಗದಂತೆ ಪಾಸ್ ಪೋರ್ಟ್ ಪ್ರತಿಯನ್ನು ತೆಗೆದಿಟ್ಟಿದ್ದರು. ಮನೆಯವರು ಏಕೈಕ ಮಗ ವಿದೇಶದಿಂದ ಬರುತ್ತಾನೆಂದು ಜೂ.20 ರಂದು ಗುರುಪ್ರಸಾದ್ ನಿಧನ ಆಗಿದ್ದರೂ, 24ರ ವರೆಗೂ ಕಾದಿದ್ದರು. ಕೊನೆಗೆ, ತ್ರಿಶೂಲ್ ತನಗೆ ಬರಲಾಗುವುದಿಲ್ಲ, ನೀವು ಅಂತ್ಯಕ್ರಿಯೆ ಪೂರ್ತಿಗೊಳಿಸಿ ಎಂದು ಹೇಳಿದ್ದರಿಂದ ಅಂತ್ಯಕ್ರಿಯೆ ನೆರವೇರಿಸಿದ್ದರು.


ಜೂ.24ರಂದು ಸಂಸದ ಬ್ರಿಜೇಶ್ ಚೌಟ ಪ್ರಮಾಣ ವಚನಕ್ಕಾಗಿ ದೆಹಲಿಗೆ ತೆರಳಿದ್ದು, ಈ ವೇಳೆ ಗುರುಪ್ರಸಾದ್ ಅವರ ಹತ್ತಿರದ ಸಂಬಂಧಿಕರೋರ್ವರು ಸಂಸದರಿಗೆ ಫೋನ್ ಕರೆ ಮಾಡಿದ್ದು, ತ್ರಿಶೂಲ್ ನನ್ನು ಕರೆತರಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಕೂಡಲೇ ಸ್ಪಂದಿಸಿದ ಸಂಸದರು, ವಿದೇಶಾಂಗ ಇಲಾಖೆ ಮತ್ತು ಮಾಲ್ಡೀವ್ಸ್ ಹೈಕಮಿಷನ್ ಗೆ ಇಮೇಲ್ ಮೂಲಕ ಸಂದೇಶ ಕಳುಹಿಸಿದ್ದರು. ಸಂಸದರ ಮನವಿಗೆ ಮಾಲ್ಡೀವ್ಸ್ ಭಾರತೀಯ ರಾಯಭಾರಿ ಕಚೇರಿಯಿಂದ ಪ್ರತಿಕ್ರಿಯೆ ಬಂದಿದ್ದು, ಯುವಕನ ಬಿಡುಗಡೆಗೆ ಪ್ರಯತ್ನಿಸುವ ಭರವಸೆ ಲಭಿಸಿತ್ತು.
ರಾಯಭಾರಿ ಕಚೇರಿಯ ಸೂಚನೆಯಂತೆ, ಖಾಸಗಿ ಕಂಪನಿಯ ಪ್ರತಿನಿಧಿಗಳು ಯುವಕನಿಗೆ ರಜೆ ಕೊಟ್ಟಿದ್ದಲ್ಲದೆ, ವೇತನ ಸಹಿತ ಊರಿಗೆ ಕಳುಹಿಸಿಕೊಟ್ಟಿದ್ದಾರೆ.
ಜೂ.27ರ ರಾತ್ರಿ ತ್ರಿಶೂಲ್ ಬೆಂಗಳೂರು ತಲುಪಿದ್ದು, ಅಲ್ಲಿಂದ ರಸ್ತೆ ಮೂಲಕ ಶುಕ್ರವಾರ ಬೆಳಗ್ಗೆ ಊರಿಗೆ ತಲುಪಿದ್ದಾರೆ.
ಏಕೈಕ ಮಗ ಆಗಿದ್ದರಿಂದ ಮೃತದೇಹವನ್ನು ಮಂಗಳೂರಿನಲ್ಲೇ ಇಟ್ಟು ನಾಲ್ಕು ದಿನ ಕಾದೆವು. ಕೊನೆಗೆ, ಅಂತ್ಯಕ್ರಿಯೆ ನೆರವೇರಿಸಿದೆವು. ಸಂಸದರಿಗೆ ಕರೆ ಮಾಡಿದಾಗ ತುರ್ತು ಸ್ಪಂದಿಸಿ ಬಹಳ ಉಪಕಾರ ಮಾಡಿದ್ದಾರೆ. ಅದನ್ನು ಯಾವತ್ತೂ ಮರೆಯುವುದಿಲ್ಲ ಎಂದು ತ್ರಿಶೂಲ್ ಕುಟುಂಬಸ್ಥರು ಸಂಸದರ ಕಾರ್ಯದ ಬಗ್ಗೆ ಧನ್ಯಾತಭಾವ ವ್ಯಕ್ತಪಡಿಸಿದ್ದಾರೆ.