ನವದೆಹಲಿ : ಓಮನ್ ಕರಾವಳಿಯ ಹಾರ್ಮುಜ್ ಜಲಸಂಧಿ ಬಳಿ ಇರಾನ್‌ನ ಸೈನಿಕ ಪಡೆಗಳು ಸೈಪ್ರಸ್ ಧ್ವಜ ಹೊತ್ತಿದ್ದ ವಾಣಿಜ್ಯ ಹಡಗು ‘ಜಿಎಫ್‌ಎಸ್ ಗ್ಯಾಲಕ್ಸಿ’ ಮೇಲೆ ನಡೆಸಿರುವ ಭೀಕರ ದಾಳಿಯನ್ನು ಭಾರತ ಸರ್ಕಾರ ಭಾನುವಾರ ತೀವ್ರವಾಗಿ ಖಂಡಿಸಿದೆ. ಈ ಹಡಗಿನಲ್ಲಿ ಒಟ್ಟು 11 ಮಂದಿ ಭಾರತೀಯ ನಾವಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಪೈಕಿ 10 ಭಾರತೀಯರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಆದರೆ ದುರದೃಷ್ಟವಶಾತ್ ಒಬ್ಬ ಭಾರತೀಯ ನಾವಿಕ ಕಾಣೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ವಿದೇಶಾಂಗ ಸಚಿವಾಲಯ (MEA) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.


ಈ ಕುರಿತು ನವದೆಹಲಿಯಲ್ಲಿ ಸುದೀರ್ಘ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ಸಚಿವಾಲಯ, “ಓಮನ್ ಕರಾವಳಿಯಲ್ಲಿ ವಾಣಿಜ್ಯ ಹಡಗಿನ ಮೇಲಿನ ದಾಳಿ ತೀವ್ರ ಕಳವಳಕಾರಿ. ಮಸ್ಕತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಒಮಾನಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾಣೆಯಾಗಿರುವ ಭಾರತೀಯ ಪ್ರಜೆಯ ಪತ್ತೆಗಾಗಿ ಯುದ್ಧೋಪಾದಿಯಲ್ಲಿ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ” ಎಂದು ಸ್ಪಷ್ಟಪಡಿಸಿದೆ.

ಇರಾನ್ ಮತ್ತು ಅಮೆರಿಕ ನಡುವಿನ ಮಿಲಿಟರಿ ಸಂಘರ್ಷದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ. ಅನುಮೋದಿತ ಮಾರ್ಗವನ್ನು ಬಿಟ್ಟು ಸಾಗುತ್ತಿದ್ದ ಹಿನ್ನೆಲೆಯಲ್ಲಿ ಜಿಎಫ್‌ಎಸ್ ಗ್ಯಾಲಕ್ಸಿ ಹಡಗಿನ ಮೇಲೆ ಎಚ್ಚರಿಕೆ ಗುಂಡು ಹಾರಿಸಲಾಗಿದೆ ಎಂದು ಇರಾನ್‌ನ ಟೆಹ್ರಾನ್ ಆಡಳಿತ ಸಮರ್ಥಿಸಿಕೊಂಡಿದೆ. ಆದರೆ, ಈ ದಾಳಿಯ ಬೆನ್ನಲ್ಲೇ ಇರಾನ್ ವಿರುದ್ಧ ಕೆರಳಿರುವ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಪಡೆಗಳು ಇರಾನ್‌ನ ಸುಮಾರು 140 ಮಿಲಿಟರಿ ನೆಲೆಗಳ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿ ಧೂಳೀಪಟ ಮಾಡಿವೆ. ಇರಾನ್ ಸಹ ಪ್ರತಿಯಾಗಿ ಬಹ್ರೇನ್, ಕುವೈತ್, ಕತಾರ್, ಯುಎಇ ಮತ್ತು ಒಮಾನ್ ದೇಶಗಳ ಮೇಲಕ್ಕೆ ಕ್ಷಿಪಣಿ ಮಳೆ ಸುರಿಸಿದ್ದು, ಜಾಗತಿಕ ಇಂಧನ ಸಾಗಣೆಯ ಪ್ರಮುಖ ಜಲಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಕಂಪ್ಲೀಟ್ ಆಗಿ ಬಂದ್ ಮಾಡಿದೆ.

ಮಧ್ಯಪ್ರಾಚ್ಯದ ಈ ಭೀಕರ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸಿರುವ ಭಾರತ, “ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ಮುಕ್ತ ಮತ್ತು ಅಡೆತಡೆಯಿಲ್ಲದ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಯಾವುದೇ ಧಕ್ಕೆ ಬರಬಾರದು. ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದನ್ನು ತಕ್ಷಣ ನಿಲ್ಲಿಸಬೇಕು. ಉಭಯ ದೇಶಗಳು ರಾಜತಾಂತ್ರಿಕ ಮಾತುಕತೆಯ ಮೂಲಕ ಶಾಂತಿ ಮರುಸ್ಥಾಪಿಸಬೇಕು” ಎಂದು ನವದೆಹಲಿ ಜಾಗತಿಕ ವೇದಿಕೆಯಲ್ಲಿ ಕರೆ ನೀಡಿದೆ.


