Home ಉಡುಪಿ ಉಡುಪಿ: ರೌಡಿಗಳನ್ನು ಮಟ್ಟ ಹಾಕಲು‌ ರಾತ್ರಿ 10 ಗಂಟೆಯಿಂದ ಪಬ್, ಬಾರ್ ಬಂದ್

ಉಡುಪಿ: ರೌಡಿಗಳನ್ನು ಮಟ್ಟ ಹಾಕಲು‌ ರಾತ್ರಿ 10 ಗಂಟೆಯಿಂದ ಪಬ್, ಬಾರ್ ಬಂದ್

0

ಉಡುಪಿಯಲ್ಲಿ ನಡೆದ ನಡುಬೀದಿ ಗ್ಯಾಂಗ್ ವಾರ್ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಪುಡಿರೌಡಿಗಳ ಅಟ್ಟಹಾಸವನ್ನು ಮಟ್ಟಹಾಕಲು ಮಣಿಪಾಲದಲ್ಲಿ ರಾತ್ರಿ 10 ಗಂಟೆಯಿಂದ ಹೊಟೇಲ್ ಬಾರ್ ಸೇರಿದಂತೆ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಸೂಚಿಸಿದ್ದಾರೆ.


ತರುಣರು ತಡರಾತ್ರಿವರೆಗೆ ಓಪನ್ ಇರುವ ಬಾರ್‌ಗಳಿಂದ ಮದ್ಯ ಕುಡಿದು ಮದ್ಯದ ಅಮಲಿನಲ್ಲಿ ಬೀದಿಯಲ್ಲೇ ಹೊಟೆದಾಟ ನಡೆಸುವ ಹಂತಕ್ಕೆ ತಲುಪಿರುವುದರಿಂದ ಪೊಲೀಸ್ ಅಧೀಕ್ಷಕರು ಈ ರೀತಿಯ ಕಠಿನ ತೀರ್ಮಾನಕ್ಕೆ ಬಂದಿದ್ದಾರೆ.

ಕಳೆದ ಎರಡು ದಿನಗಳಿಂದ ಮಣಿಪಾಲದ ಬಾರ್, ಹೊಟೇಲ್, ಅಂಗಡಿ ಮಾಲಕರಿಗೆ ರಾತ್ರಿ 10ಗಂಟೆಯೊಳಗೆ ಅಂಗಡಿ ಬಂದ್ ಮಾಡುವಂತೆ ಪೊಲೀಸರು ಸೂಚನೆ ನೀಡುತ್ತಿದ್ದಾರೆ. ಬುಧವಾರ ರಾತ್ರಿ ಭಾಗಃಶ ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡಿದ್ದವು. ಆದರೆ ಕೆಲವು ಬಾರ್‌ಗಳು ರಾತ್ರಿ 11ಗಂಟೆಯವರೆಗೂ ತೆರೆದಿರುವುದು ಕಂಡುಬಂದವು. ಆದರೆ ನಿನ್ನೆಯಿಂದ 10 ಗಂಟೆಗೆ ಬಾರ್, ವೈನ್ ಶಾಪ್‌ಗಳು ಬಂದಾಗಿವೆ.

‘ಮಣಿಪಾಲದ ಎಲ್ಲ ಅಂಗಡಿಮುಗ್ಗಟ್ಟುಗಳನ್ನು ಬಂದ್ ಮಾಡಿಸಿ ಡ್ರಗ್ಸ್ ಗಾಂಜಾ ಸೇರಿದಂತೆ ಮಾದಕ ದ್ರವ್ಯ ವಿರುದ್ಧ ಕಾರ್ಯಾಚರಣೆ ನಡೆಸಲಾಗು ವುದು. ಮಣಿಪಾಲದಲ್ಲಿ ಈ ರೀತಿ ಕಾರ್ಯಾಚರಣೆ ಮಾಡಿದರೆ ಡ್ರಗ್ಸ್ ದಂಧೆಯ ಮೂಲಗಳ ಬಗ್ಗೆ ಮಾಹಿತಿ ಸಿಗಲಿದೆ. ಅದರಂತೆ ಮುಂದೆ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು ಎಂದು ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.

‘ಈಗಾಗಲೇ ಬಾರ್, ಹೊಟೇಲ್, ಅಂಗಡಿಗಳ ಮಾಲಕರನ್ನು ಸೂಚನೆ ನೀಡಲಾಗಿದೆ. ಬುಧವಾರ ರಾತ್ರಿ ಕೆಲವರು 10ಗಂಟೆಗೆ ಬಂದ್ ಮಾಡುವ ಬಗ್ಗೆ ಪೊಲೀಸರೊಂದಿಗೆ ವಾದ ಮಾಡಿದ್ದಾರೆಂಬ ಮಾಹಿತಿ ಸಿಕ್ಕಿದೆ. ಆದರೆ ಇಂದು ರಾತ್ರಿಯಿಂದ ಎಲ್ಲ ಬಂದ್ ಮಾಡಲಿದ್ದಾರೆ. ಸದ್ಯ ಮಣಿಪಾಲದಲ್ಲಿ ಮಾತ್ರ ಬಂದ್ ಇರುತ್ತದೆ. ಉಡುಪಿಯಲ್ಲಿ ಯಾವುದೇ ರೀತಿಯ ಬಂದ್ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here