ಭೋಪಾಲ್: ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆಯ ನಡುವಿನ ವಿವಾಹವು ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಾನ್ಯವಾಗಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. ಅಂತರ್ ಧರ್ಮೀಯ ವಿವಾಹವನ್ನು ನೋಂದಾಯಿಸಲು ಪೊಲೀಸ್ ರಕ್ಷಣೆಗಾಗಿ ಸಲ್ಲಿಸಲಾದ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಅವರಿದ್ದ ಪೀಠವು, ವಿಶೇಷ ವಿವಾಹ ಕಾಯಿದೆ 1954ರ ಅಡಿಯಲ್ಲಿ ವಿವಾಹವಾಗಿದ್ದರೂ ಸಹ ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆಯ ನಡುವಿನ ವಿವಾಹವನ್ನು ಮುಸ್ಲಿಂ ಕಾನೂನಿನ ಅಡಿಯಲ್ಲಿ ಅಮಾನ್ಯವೆಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ. ನ್ಯಾಯಾಲಯ (ಮೇ 27)ದಂದು ನೀಡಿದ್ದ ತನ್ನ ಆದೇಶದಲ್ಲಿ, ಮಹಮದೀಯ ಕಾನೂನಿನ ಪ್ರಕಾರ ‘ವಿಗ್ರಹಾರಾಧಕ ಅಥವಾ ಅಗ್ನಿ ಪೂಜಕ ಹುಡುಗಿಯೊಂದಿಗೆ ಮುಸ್ಲಿಂ ಹುಡುಗನ ವಿವಾಹವು ಮಾನ್ಯವಲ್ಲ, ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ವಿವಾಹವನ್ನು ನೋಂದಾಯಿಸಿದರೂ ಇದು ಅನಿಯಮಿತ (ಫಾಸಿದ್) ಮದುವೆಯಾಗಿದೆ” ಎಂದು ಹೇಳಿದೆ. ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆ ದಂಪತಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ವಿಶೇಷ ವಿವಾಹ ಕಾಯ್ದೆಯಡಿ ವಿವಾಹವನ್ನು ಧಾರ್ಮಿಕ ವಿಧಿಗಳನ್ನು ಮಾಡದಿದ್ದಕ್ಕಾಗಿ ಪ್ರಶ್ನಿಸಲಾಗದಿದ್ದರೂ, ವೈಯಕ್ತಿಕ ಕಾನೂನಿನ ಅಡಿಯಲ್ಲಿ ಅದನ್ನು ನಿಷೇಧಿಸಿದರೆ ಅಂತಹ ವಿವಾಹವು ಮಾನ್ಯವಾದ ವಿವಾಹವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.