‘ಸೇತುವೆಗಳ ಸರದಾರ’ ಪದ್ಮಶ್ರೀ ಡಾ. ಗಿರೀಶ್‌ ಭಾರದ್ವಾಜ್‌ ನಿಧನ

Prakhara News
1 Min Read

ಸುಳ್ಯ: ‘ಸೇತುವೆಗಳ ಸರದಾರ’ ಎಂದೇ ಖ್ಯಾತರಾಗಿದ್ದ, ಪದ್ಮಶ್ರೀ ಪುರಸ್ಕೃತ ಹಿರಿಯ ಸಾಮಾಜಿಕ ಕಾರ್ಯಕರ್ತ ಹಾಗೂ ಇಂಜಿನಿಯರ್ ಡಾ. ಗಿರೀಶ್ ಭಾರದ್ವಾಜ್ (76) ಅವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ವಿಧಿವಶರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸೇತುವೆಗಳ ಸರದಾರ:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಅರಂತೋಡಿನವರಾದ ಗಿರೀಶ್ ಭಾರದ್ವಾಜ್ ಅವರು ಗ್ರಾಮೀಣ ಭಾಗದ ಸಂಪರ್ಕ ಕ್ರಾಂತಿಗೆ ಹೊಸ ಭಾಷ್ಯ ಬರೆದವರು. ನದಿ, ತೊರೆಗಳನ್ನು ದಾಟಲು ಸೂಕ್ತ ಸಂಪರ್ಕವಿಲ್ಲದೆ ದ್ವೀಪಗಳಂತಾಗಿದ್ದ ದೇಶದ ನೂರಾರು ಗ್ರಾಮೀಣ ಪ್ರದೇಶಗಳಿಗೆ ಇವರು ಆಶಾಕಿರಣವಾಗಿದ್ದರು. ಸರ್ಕಾರಿ ಅನುದಾನದ ನಿರೀಕ್ಷೆಯಿಲ್ಲದೆ, ಸ್ಥಳೀಯರ ಸಹಭಾಗಿತ್ವದೊಂದಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸುಲಭವಾಗಿ ನಿರ್ಮಿಸಬಹುದಾದ ತೂಗುಸೇತುವೆಗಳ (Suspension Bridges) ವಿನ್ಯಾಸ ರೂಪಿಸಿ, ಸೈ ಎನಿಸಿ Bridgeman Of India ಎಂದು ಖ್ಯಾತರಾಗಿದ್ದರು . ಕರ್ನಾಟಕ, ಕೇರಳ, ಆಂಧ್ರಪ್ರದೇಶ ಹಾಗೂ ಒಡಿಶಾ ಸೇರಿದಂತೆ ದೇಶದ ವಿವಿಧೆಡೆ ಸುಮಾರು 140ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿದ ಹೆಗ್ಗಳಿಕೆ ಇವರದ್ದಾಗಿದೆ.

ಪದ್ಮಶ್ರೀ ಗೌರವ:
ಗ್ರಾಮೀಣ ಭಾಗದ ಇವರ ಈ ಅಭೂತಪೂರ್ವ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು 2017ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಶ್ರೀ’ ನೀಡಿ ಗೌರವಿಸಿತ್ತು. ತೂಗುಸೇತುವೆಗಳ ಮೂಲಕ ಗ್ರಾಮೀಣ ಭಾರತವನ್ನು ಬೆಸೆದ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಕರಾವಳಿ ಜನತೆ ಕಂಬನಿ ಮಿಡಿದಿದೆ.

Share This Article
Leave a Comment